ಮಂಗಳೂರು: ಮೂರು ದಿನಗಳಿಂದ ಅನ್ನ ಆಹಾರವಿಲ್ಲದೇ ಕರುಣಾಜನಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಶಕ್ತಿನಗರ ಕಕ್ಕೆಬೆಟ್ಟಿನ ಕುಟುಂಬದ ಮುಖ್ಯಸ್ಥ ಶ್ರೀನಿವಾಸ್ (38) ಅವರು ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ನಡುವೆ, ಮಕ್ಕಳ ಕಲ್ಯಾಣ ಸಂಸ್ಥೆಯ ಆಶ್ರಯದಲ್ಲಿದ್ದ ಇಬ್ಬರು ಮಕ್ಕಳನ್ನು ಅವರ ಮಾವನ ಆಸರೆಗೆ ಒಪ್ಪಿಸಲಾಗಿದೆ.

ಅನಾರೋಗ್ಯಪೀಡಿತರಾಗಿ, ಆಹಾರವೂ ಸೇವಿಸದೆ, ತಾಯಿ ಹಾಗೂ ಎರಡು ಮಕ್ಕಳೊಂದಿಗೆ ಶಕ್ತಿನಗರ ಬಳಿಯ ಕಲ್ಪನೆ ಕಕ್ಕೆಬೆಟ್ಟು ಎಂಬಲ್ಲಿ ಶ್ರೀನಿವಾಸ್ (38) ಹಾಗೂ ಮಲ್ಲಿಕಾ (32) ದಂಪತಿ ವಾಸಿಸುತ್ತಿದ್ದು, ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಚೈಲ್ಡ್‌ಲೈನ್- 1098 ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪೈಕಿ, ಶ್ರೀನಿವಾಸ್, ಚಿಕಿತ್ಸೆ ಫಲಕಾರಿಯಾಗದೆ, ಬುಧವಾರ ಮೃತಪಟ್ಟಿದ್ದರೆ, ಪತ್ನಿ ಮಲ್ಲಿಕಾ ಅವರನ್ನು ಗುರುವಾರ ವೆನ್ಲಾಕ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ್ಕೆ ಸ್ಥಳಾಂತರ ಮಾಡಿದ್ದು, ಗಂಭೀರ ಸ್ಥಿತಿಯಲ್ಲೇ ಇದ್ದಾರೆ.
ತಾಯಿಗೆ ಗೊತ್ತೇ ಇರಲಿಲ್ಲ: ಮಗ ಹಾಗೂ ಸೊಸೆಯ ಅನಾರೋಗ್ಯ ಹಾಗೂ ಅಕಾರಿಗಳು ಚಿಕಿತ್ಸೆಗೆ ಕೊಂಡೊಯ್ದ ವಿಷಯ ತಿಳಿಸಿ ಅಳುತ್ತಿದ್ದ ಅವರು, ತನ್ನ ಮಗ, ಸೊಸೆ ಹೇಗೆ ಇದ್ದಾರೆ, ನೀವು ಆಸ್ಪತ್ರೆಗೆ ಭೇಟಿ ನೀಡಿದಿರಾ ಎಂದು ಪದೇ ಪದೇ ಪ್ರಶ್ನಿಸುತ್ತಿದ್ದರು. ಅವರಿಗೆ ತನ್ನ ಮಗ ತೀರಿಕೊಂಡಿರುವ ವಿಷಯ ಗೊತ್ತಿರಲಿಲ್ಲ.
‘ತಾನು ಚೇಳೂರು, ಅಮ್ಮೆಂಬಳ ನಿವಾಸಿಯಾಗಿದ್ದು, ಸ್ಥಳೀಯ ಕಲ್ಪನೆಗೆ 1957ರ ಮೇ 8ರಂದು ಮದುವೆಯಾಗಿ ಆಗಮಿಸಿದ್ದೇನೆ. ಪತಿ ಕೆ.ವೆಂಕಪ್ಪ ಅವರು ಸಿಪಿಸಿ ಕಂಪನಿಯಲ್ಲಿ 45 ವರ್ಷ ದುಡಿದು, ನಿವೃತ್ತರಾಗಿದ್ದರು. ತಮಗೆ ಐದು ಮಂದಿ ಮಕ್ಕಳು, ಅವರಲ್ಲಿ ಮೂವರು ತೀರಿಕೊಂಡಿದ್ದು, ಒಬ್ಬ ಮಗಳು ತಲಪಾಡಿಯಲ್ಲಿದ್ದು, ಆಕೆಗೂ ಸೌಖ್ಯವಿಲ್ಲ. ಶ್ರೀನಿವಾಸ ಕೊನೆಯವ. ಎಂಟು ವರ್ಷದ ಹಿಂದೆ ಈ ಜಾಗ ಖರೀದಿಸಿ ಮನೆ ಕಟ್ಟಿದ್ದೇವೆ’ ಎಂದು ಸರಸ್ವತಿ ವಿವರಿಸಿದರು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಸರಸ್ವತಿ ಅವರ ಸಹೋದರಿಯರು, ಅವರ ಮಕ್ಕಳು, ಅಳಿಯ ಮನೆಗೆ ಆಗಮಿಸಿದರು. ಮನೆಯಲ್ಲಿ ಇಷ್ಟು ಕಷ್ಟದ ಪರಿಸ್ಥಿತಿ ಇದ್ದರೂ, ತಮಗೆ ಕರೆ ಮಾಡಿ ಹೇಳಿಲ್ಲ ಎಂದ ಅವರು, ಬಳಿಕ ರೋದಿಸುತ್ತಲೇ, ಶ್ರೀನಿವಾಸ್ ಮೃತಪಟ್ಟಿರುವ ವಿಷಯವನ್ನು ತಾಯಿಗೆ ತಿಳಿಸಿದರು. ತಾಯಿಯ ಮಗನಿಗಾಗಿ ಕಣ್ಣೀರಿಡುತ್ತಿದ್ದರು. ಬಳಿಕ ಅವರ ಇತರ ಸಂಬಂಧಿಕರು ಮನೆಗೆ ಆಗಮಿಸಿದರು. ವೆನ್ಲಾಕ್ ಶವಾಗಾರದಲ್ಲಿದ್ದ ಮೃತದೇಹವನ್ನು ಸಂಜೆ ತಂದು, ಶಕ್ತಿನಗರ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.
ಮಕ್ಕಳಿಗೆ ಮಾವನ ಆಸರೆ: ರೋಗಪೀಡಿತ ತಂದೆ-ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಇಬ್ಬರೂ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಆದೇಶದಂತೆ ಪುನರ್ವಸತಿ ಕಲ್ಪಿಸಲಾಗಿತ್ತು. ಬಳಿಕ ಮಕ್ಕಳ ತಾಯಿ ಮಲ್ಲಿಕಾ ಅವರ ಸಹೋದರ ಪ್ರಕಾಶ್ ಅವರ ಮನವಿಗೆ ಮೇರೆಗೆ ಅವರಿಗೆ ಹಸ್ತಾಂತರ ಮಾಡಲಾಗಿದೆ.
ತಾಯಿಯ ಸ್ಥಿತಿ ಗಂಭೀರ: ಹಿಂದೆ ಸಿಪಿಸಿಯಲ್ಲಿ ನಂತರ, ಮದ್ಯದ ಕಂಪನಿಯಲ್ಲಿದ್ದ ಶ್ರೀನಿವಾಸ್‌ಗೆ ವಿಪರೀತ ಕುಡಿತದ ಚಟವಿತ್ತು. ಮೂರು ತಿಂಗಳ ಹಿಂದೆ ಪಾರ್ಶ್ವವಾಯುಪೀಡಿತರಾಗಿ, ದೈಹಿಕ ಹಾಗೂ ಮಾತನಾಡುವ ಶಕ್ತಿ ಕಳೆದುಕೊಂಡಿದ್ದರು. ಈ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದಾಯವೂ ಇರಲಿಲ್ಲ.
ನಾಲ್ಕು ವರ್ಷದಿಂದ ಸೋಂಕಿನಿಂದ ಬಳಲುತ್ತಿದ್ದ ಶ್ರೀನಿವಾಸರ ಪತ್ನಿ ಮಲ್ಲಿಕಾ ಕೂಡಾ ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ಚಿಕಿತ್ಸೆ ಪಡೆಯುತ್ತಲೇ ಇದ್ದರು. ದಿನದಿಂದ ದಿನಕ್ಕೆ ಕ್ಷೀಣರಾಗುತ್ತಾ, ಏಳಲೂ ಆಗದೆ, ಅಡುಗೆ ಮಾಡದ ಪರಿಸ್ಥಿತಿ ಇತ್ತು. ಇದರಿಂದ ಗಂಡ- ಹೆಂಡತಿ ಜತೆಗೆ ತಾಯಿ ಸರಸ್ವತಿ ಹಾಗೂ ಆರು ಮತ್ತು ನಾಲ್ಕು ವರ್ಷ ಪ್ರಾಯದ ಎರಡು ಮಕ್ಕಳೂ ಉಪವಾಸ ಬೀಳುವಂತಾಗಿತ್ತು. ನೆರೆಮನೆಯವರು ತಂದು ಕೊಡುತ್ತಿದ್ದ ಆಹಾರ ಸೇವಿಸಿ ಬದುಕುತ್ತಿದ್ದರು.
ಮೂರು ದಿನಗಳ ಹಿಂದೆ, ಮನೆ ಬಾಗಿಲು ಮುಚ್ಚಿದ್ದು, ಒಳಗಿನಿಂದ ಮಕ್ಕಳು ಕೂಗುವ ಶಬ್ದ ಕೇಳುತ್ತಿತ್ತು. ನೆರೆಮನೆಯವರು ಹೋಗಿ ಎದುರಿನ ಬಾಗಿಲು ಬಡಿದರೂ ತೆರೆಯುವವರು ಇರಲಿಲ್ಲ. ದಂಪತಿ ನೆಲದಲ್ಲಿ ಬಿದ್ದು, ಏಳುವ ಸ್ಥಿತಿಯಲ್ಲಿ ಇರಲಿಲ್ಲ. ತಾಯಿ ವಯೋಸಹಜ ಅಶಕ್ತರು. ಬಳಿಕ ಮಕ್ಕಳು ಯಾವುದೋ ವಸ್ತು ಬಳಸಿ ಬಾಗಿಲ ಚಿಲಕ ತೆರೆದಿದ್ದರು. ನಂತರ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅನಾರೋಗ್ಯಪೀಡಿತ ಇಬ್ಬರನ್ನೂ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇತ್ತ ಆಸ್ಪತ್ರೆಯಲ್ಲಿರುವ ಮಲ್ಲಿಕಾ, ಅನಾರೋಗ್ಯ, ಹಸಿವು, ಮಾನಸಿಕ ಆಘಾತದಿಂದ ಜರ್ಜರಿತರಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 32ರ ಹರೆಯದ ಮಲ್ಲಿಕಾ ಅವರ ಕಣ್ಣುಗುಡ್ಡೆಗಳೂ ಒಳಗೆ ಹೋಗಿ, ಕೈ ಕಾಲುಗಳು ಕಡ್ಡಿಯಂತಾಗಿವೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಗೆ ಶಾಸಕ ಜೆ.ಆರ್. ಲೋಬೊ ಭೇಟಿ ನೀಡಿ, ಮಲ್ಲಿಕಾ ಅವರನ್ನು ವೀಕ್ಷಿಸಿದರು.
