ಬಂಟ್ವಾಳ: ಕಾವಳಪಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಾಡಬೆಟ್ಟು ಎಂಬಲ್ಲಿ ಕೃಷಿ ಆಧಾರಿತ ಜನವಸತಿ ಪ್ರದೆಶದಲ್ಲಿ ಖಾಸಗಿ ವ್ಯಕ್ತಿಯೋರ್ವರು ಕೈಗಾರಿಕ ಘಟಕ ನಿರ್ಮಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಕಾಡಬೆಟ್ಟು 1ನೇ ಬ್ಲಾಕಿನ ಸರ್ವೆ ನಂಬ್ರ 13-8ಎ4ರಲ್ಲಿ 1.17 ಎಕ್ರೆ ವಿಸ್ತೀರ್ಣದ ಜಮೀನಿನಲ್ಲಿ ಗೇರು ಬೀಜ ಬೇಯಿಸಿ ವಿಂಗಡಿಸುವ ಘಟಕ ನಿರ್ಮಾ ಣ ಮಾಡಲಾಗುತ್ತಿದೆ. ಇಲ್ಲಿ ಹೊಗೆ ಬಿಡುವ ಕೊಳವೆ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸುವುದಾಗಿ ಕೈಗಾರಿಕ ಘಟಕದ ಮಾಲಕ ತಿಳಿಸಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ಕೈಗಾರಿಕೆಯು ಜನವಸತಿ ಪ್ರದೇಶದ ನೆಲಮಟ್ಟದಿಂದ ಸುಮಾರು 30 ಅಡಿ ಕೆಳ ಹಂತದಲ್ಲಿ ನಿರ್ಮಾಣವಾಗುತ್ತಿದ್ದು ಹೊಗೆ ಉಗುಳುವ ಕೊಳವೆಯು ನೆಲಮಟ್ಟಕ್ಕೆ ಬಂದು ಅದರ ವಿಷಕಾರಿ ಧೂಮವು ಪರಿಸರದ ಮನೆಗಳ ಸುತ್ತಮುತ್ತ ಹರಡಿ ಜನರಿಗೆ ತೊಂದರೆಯಾಗುವ ಸಂಭವವಿದೆ ಎಂದು ಆರೋಪಿಸಿದ್ದಾರೆ.
ಇದೇ ಸ್ಥಳದಲ್ಲಿ ಸರ್ಕಾರಿ ಅಧಿನಕ್ಕೋಳಪಟ್ಟ ಜಾಗದಲ್ಲಿನ ನೀರಿನ ಕೆರೆ, 500 ಅಧಿಕ ಜನ ವಸತಿ, ಪ್ರಾಥಮಿಕ ಶಾಲೆ, ಸರ್ವಧರ್ಮಗಳ ಧಾರ್ಮಿಕ ಕೇಂದ್ರಗಳಿದೆ. ಇಲ್ಲಿಗೆ ಸಮೀಪದಲ್ಲಿರುವ ಕೊಡ್ಯಮಲೆ ರಕ್ಷಿತಾರಣ್ಯವು ಅಳಿವಿನಂಚಿನಲ್ಲಿರುವ ಅನೇಕ ಜೀವಿಗಳಿಂದ ಕೂಡಿದ್ದು ಇದರ ಹಾನಿಕಾರಕ ಹೊಗೆಯು ಸುತ್ತಮುತ್ತಲೂ ಪಸರಿಸುವುದರಿಂದ ಹಾಗೂ ಯಂತ್ರೋಪಕರಣಗಳು ಶಬ್ದ ಮಾಲಿನ್ಯ ಮಾಡುವುದರಿಂದ ವಾತವರಣವು ಅಧಿಕ ತಾಪಮಾನದಿಂದ ಕೂಡಿ ಪರಿಸರದ ಜನರು ಹಾಗೂ ರಕ್ಷಿತಾರಣ್ಯದ ಜೀವಿಗಳು ಭವಿಷ್ಯದಲ್ಲಿ ಭೀಕರ ಕಾಯಿಲೆಗೆ ತುತ್ತಾಗುವ ಸಂಭವವಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಈಗಾಗಲೇ ಸ್ಥಳೀಯ ಪಂಚಾಯತ್ಗೆ ಗ್ರಾಮಸ್ಥರು ದೂರು ನೀಡಿದ ಹಿನ್ನಲೆಯಲ್ಲಿ ಘಟಕ ಸ್ಥಾಪನೆಯನ್ನು ಕೈ ಬಿಡುವಂತೆ ಕಾವಳ ಪಡೂರು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಕೈಗಾರಿಕೆ ಮಾಲಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸ್ಥಳೀಯ ವ್ಯಕ್ಯಿಯೋರ್ವರು ಈ ಬಗ್ಗೆ ರಾಜ್ಯ ಉಚ್ಛನ್ಯಾಯಲಯದಲ್ಲೂ ದಾವೆ ಹೂಡಿದ್ದಾರೆ. ಆದರೂ ಕೈಗಾರಿಕ ಘಟಕದ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ.