ಮಂಗಳೂರು/ಉಡುಪಿ : ಕರಾವಳಿಯ ವಿವಿಧೆಡೆ ಮಂಗಳವಾರ ಸಂಜೆ ಮಿಂಚು-ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಸವಣೂರು ಸಮೀಪದ ಮಾಂತೂರಿನಲ್ಲಿ ಸಿಡಿಲು ಹೊಡೆದು ರಶೀದಾ (32) ಮೃತಪಟ್ಟಿದ್ದಾರೆ.
ಮಂಗಳೂರು ನಗರದಲ್ಲಿ ರಾತ್ರಿ ವೇಳೆಗೆ ಉತ್ತಮ ಮಳೆಯಾಗಿದೆ. ಗುಡುಗು – ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಮಾಯವಾಗಿದೆ. ಧಾರಾಕಾರ ಮಳೆಯಿಂದಾಗಿ ವಾಹನಗಳ ಸಂಚಾರಕ್ಕೂ ಅಡ್ಡಿಯಾಯಿತು.

ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಪ್ರದೇಶಗಳಲ್ಲಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ, ಬಂಟ್ವಾಳ, ವಿಟ್ಲ, ಇರಾ, ಮುಡಿಪು, ಆರ್ಲಪದವು, ಕೊಲ್ಲಮೊಗ್ರು, ಮಚ್ಚಿನ, ಮಡಂತ್ಯಾರು, ಮುಂತಾದ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಸುಳ್ಯದಲ್ಲಿ ಗಾಳಿ ಮಳೆಗೆ ಹಲವು ತೆಂಗು, ಅಡಿಕೆ ಮರಗಳು ಉರುಳಿವೆ. ಬಜಪೆ, ಸುರತ್ಕಲ್ ಪರಿಸರದಲ್ಲಿಯೂ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಹಿರಿಯಡ್ಕ ಬಜಗೋಳಿ, ಹೆಬ್ರಿ, ಮುನಿಯಾಲು, ಅಜೆಕಾರು, ಕುಂಭಾಶಿ, ಕೆದೂರು, ತೆಕ್ಕಟ್ಟೆ ಮೊದಲಾದೆಡೆ ಉತ್ತಮ ಮಳೆಯಾಗಿದೆ. ಕಾರ್ಕಳ, ಸಾಣೂರು, ಮಾಳ, ಬೈಲೂರು, ಕೆರ್ವಾಶೆಯಲ್ಲಿ ಸಾಮಾನ್ಯ ಮಳೆಯಾಗಿತ್ತು.
ಸಿಡಿಲು: ವ್ಯಕ್ತಿಗೆ ಗಾಯ ; ಎರಡು ದನಗಳ ಸಾವು
ಧರ್ಮಸ್ಥಳ ಸಮೀಪ ಮಂಗಳವಾರ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ವೃತ್ತಿಯಲ್ಲಿ ಜೀಪು ಚಾಲಕರಾಗಿರುವ ಧರ್ಮಸ್ಥಳ ಗಂಗೋತ್ರಿ ವಸತಿಗೃಹ ಸಮೀಪದ ಕಂಚಿಮಾರು ಬೈಲು ಮಂಜಿತ್ತಿಲ ಮನೆಯ ಪ್ರಭಾಕರ್ (38) ಗಾಯಗೊಂಡವರು. ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಮನೆಗೂ ಹಾನಿಯಾಗಿದ್ದು, ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ. ಅವರದೇ ಹಟ್ಟಿಗೆ ಸಿಡಿಲು ಬಡಿದು ದನವೊಂದು ಸಾವಿಗೀಡಾಗಿದೆ.
ಕಾರ್ಕಳ ತಾಲೂಕಿನ ಇರ್ವತ್ತೂರಿನ ನಾರಾಯಣ ಅವರ ಕೊಟ್ಟಿಗೆಗೆ ಸಂಜೆ ವೇಳೆಗೆ ಸಿಡಿಲು ಬಡಿದು ದನವೊಂದು ಸಾವಿಗೀಡಾಗಿದೆ.
