ದೇಶಿಯ ವೈದ್ಯಕೀಯ ಪದ್ಧತಿ ಅಧ್ಯಯನವಾಗಲಿ
ಮೂಡುಬಿದರೆ: ಇಂದಿನ ದಿನಗಳಲ್ಲಿ ಶಿಕ್ಷಣ ಜೌದ್ಯೋಗಿಕವಾಗಿ ಬಳಕೆಯಾಗುತ್ತಿದ್ದರೂ, ಮಾನವೀಯತೆಯೇ ಶಿಕ್ಷಣದ ಆತ್ಮ. ಅದನ್ನು ಅರ್ಥಮಾಡಿಕೊಳ್ಳದೇ ಇದ್ದರೇ ಜೀವನಕ್ರಮ ಅಸ್ತವ್ಯಸ್ತಗೊಳ್ಳುತ್ತದೆ. ಭಾರತೀಯ ಸಂಸ್ಕ್ರತಿಗೆ ಜಾಗತಿಕ ಮನ್ನಣೆಯಿದ್ದು, ನಮ್ಮಲ್ಲಿ ದೇಶಿಯ ವೈದ್ಯಕೀಯ ಪದ್ಧತಿಯ ಅಧ್ಯಯನ, ಸಂಶೋಧನೆಯಾಗಬೇಕು. ಸಕಾರತ್ಮಕ ಯೋಚನೆ, ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿದರೆ ಸಾಧಕನಾಗಬಹುದು ಎಂದು ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸೆನೆಟ್ ಸದಸ್ಯ ಡಾ. ಅಭಿಲಾಶ್ ಪಿ.ವಿ ಹೇಳಿದರು.
ವಿದ್ಯಾಗಿರಿ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನರ್ಸಿಂಗ್ ಕಾಲೇಜು ಮತ್ತು ಆಳ್ವಾಸ್ ಇನ್ಸ್‍ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಇದರ ಬೇಸಿಕ್ ಬಿಎಸ್ಸಿ ನರ್ಸಿಂಗ್‍ನ 19ನೇ ಬ್ಯಾಚ್ ಮತ್ತು ಜನರಲ್ ನರ್ಸಿಂಗ್ ,ಮಿಡ್ ವೈಫರಿ 20ನೇ ಬ್ಯಾಚ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ, ದೀಕ್ಷಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸನ್ಮಾನ: ಮಂಗಳೂರು ಡಾ.ಎಂ.ವಿ ಶೆಟ್ಟಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ವಿ.ಕಾತ್ಯಾಯಿನಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿಸಲಾಯಿತು. ಬಳಿಕ ಮಾತನಾಡಿದ ಅವರು ನರ್ಸಿಂಗ್ ಎನ್ನುವುದು ಶ್ರೇಷ್ಟ ವೃತ್ತಿ. ಆದರ ಅದು ಇಂದು ವಾಣಿಜ್ಯೀಕರಣಗೊಳ್ಳುತ್ತಿರುವುದು ದುರದೃಷ್ಟಕರ. ದಾದಿಯರು ತಮ್ಮ ವೃತ್ತಿಯ ಶ್ರೇಷ್ಠತೆಯನ್ನು ಅರಿತು, ನಿಸ್ವಾರ್ಥ ಸೇವೆ ಮಾಡಬೇಕು. ರೋಗಿಯ ದೈಹಿಕ ಕ್ಷಮತೆಯನ್ನು ಸೂಕ್ಷ್ಮವಾಗಿ ಗುರುತಿಸಬೇಕು. ದಾದಿಯರಲ್ಲಿ ಕೀಳರಿಮೆಯಿರಬಾರದು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಎಸ್‍ಸಿಎಸ್ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿ ಲೊಲೀಟಾ ಎಸ್.ಎಂ ಡಿ’ಸೋಜಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಯತಿಕುಮಾರ್ ಸ್ವಾಮಿ ಗೌಡ ಸ್ವಾಗತಿಸಿದರು. ಪ್ರೀಮಾ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಕೆ.ಎಂ.ಗಾನವತಿ ಫ್ಲೋರನ್ಸ್ ನೈಟಂಗೇಲ್ ದಿನಾಚರಣೆ ಬಗ್ಗೆ ತಿಳಿಸಿದರು. ಶಾಲೆಟ್ ಡಿ’ಸೋಜಾ ಸನ್ಮಾನ ಪತ್ರವಾಚಿಸಿದರು. ಡೋನಾ ಜೋಸೆಫ್ ಸಾಂಸ್ಕøತಿಕ ಕಾರ್ಯಕ್ರಮದ ವಿವರ ನೀಡಿದರು. ಪ್ರೊ.ಅಶಾ ಸಿಂಥಿಯಾ ಡಿ’ಸೋಜಾ ವಂದಿಸಿದರು.
