ಮೂಡುಬಿದಿರೆ, ಏ. 12: ಶೃಂಗೇರಿ ಶ್ರೀ ಶಾರದಾಪೀಠ ಹಾಗೂ ಅಶ್ವತ್ಥಪುರದ ನಡುವಿನ ಸಂಬಂಧ ಅವಿನಾಭಾವವಾದುದು. ಶೃಂಗೇರಿ ಜಗದ್ಗುರುಗಳ ಬಗ್ಗೆ ಅಶ್ವತ್ಥಪುರ ಮಹಾಜನತೆಗೆ ಅತೀವ ಭಕ್ತಿಗೌರವ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಹೇಳಿದರು.

ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಭಾನುವಾರ ಅಶ್ವತ್ಥಪುರಕ್ಕಾಗಮಿಸಿದ ಸ್ವಾಮೀಜಿ, ಧೂಳಿಪಾದಪೂಜೆ ಬಳಿಕ ಅನುಗ್ರಹ ಸಂದೇಶ ನೀಡಿದರು.

12-shringeri
ತಮ್ಮ ಗುರುಗಳಾದ ಜಗದ್ಗುರು ಶ್ರೀ ಅಭಿನವವಿದ್ಯಾತೀರ್ಥರು 1956ರಲ್ಲಿ ತಮ್ಮ ಪ್ರಥಮ ಧರ್ಮಯಾತ್ರೆಯನ್ನು ಅಶ್ವತ್ಥಪುರ ಮೂಲಕ ಆರಂಭಿಸಿರುವುದನ್ನು ಉಲ್ಲೇಖಿಸಿದ ಶ್ರೀಗಳು, 1971ರಲ್ಲಿ ತಾವು ತಮ್ಮ ಗುರುಗಳೊಂದಿಗೆ ಕ್ಷೇತ್ರಕ್ಕಾಗಮಿಸಿದ್ದುದನ್ನು ಸ್ಮರಿಸಿದರು. ಅಶ್ವತ್ಥಪುರ ಶ್ರೀಸೀತಾರಾಮಚಂದ್ರ ದೇವರ ಕೃಪೆಯಿಂದ ಸಮಸ್ತ ಗ್ರಾಮಸ್ಥರು ಸುಭಿಕ್ಷೆಯಿಂದಿರುವುದಾಗಿ ತಿಳಿಸಿದ ಅವರು, ತಾವು ಬ್ರಹ್ಮಕಲಶ ಕುಂಭಾಭಿಷೇಕ ನಡೆಸಿ, ಸರ್ವರ ಕ್ಷೇಮಕ್ಕಾಗಿ ಪ್ರಾರ್ಥಿಸುವುದಾಗಿ ತಿಳಿಸಿದರು. ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕ್ಷೇತ್ರದ ಆಡಳಿತ ಮೊಕ್ತೇಸರ, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪಿ. ಎನ್. ರಾಜಾರಾಮ ಸ್ವಾಗತಿಸಿದರು. ಸಮಿತಿ ಗೌರವಾಧ್ಯಕ್ಷ ಕೊಪ್ಲು ಶ್ರೀನಿವಾಸ ರಾವ್, ಉಪಾಧ್ಯಕ್ಷ ಉಮೇಶ ಬೋಂಟಡ್ಕರ್ ಅಥಣಿ, ಪ್ರಧಾನ ಕಾರ್ಯದರ್ಶಿ ಎಂ. ಸಿ. ಭಾಸ್ಕರ್, ಜೊತೆ ಕಾರ್ಯದರ್ಶಿ ಡಾ. ಪಿ. ಎಸ್. ಸುರೇಶಬಾಬು, ಕೋಶಾಧಿಕಾರಿ ಮುದ್ರಬೆಟ್ಟು ರಾಮಚಂದ್ರ ರಾವ್, ಸದಸ್ಯರಾದ ಪ್ರಭಾಕರ ಭಟ್, ಅಂಬರೀಶ ರಾವ್, ನಾಗೇಶ ತಾವರೆ, ಶಿವಶಂಕರ ಮಾಯಣ, ಸುನಿಲ್ ಮುದ್ರಬೆಟ್ಟು ಇದ್ದರು.
ಪಿ. ಎಸ್. ಶ್ರೀಕಂಠಮೂರ್ತಿ ನಿರೂಪಿಸಿದರು. ಬಳಿಕ ನೃತ್ಯನಿಕೇತನ ಕೊಡವೂರು ತಂಡದವರಿಂದ ಭರತನಾಟ್ಯ ನಡೆಯಿತು.
ಅದಕ್ಕೂ ಮುನ್ನ ಉಭಯ ಶ್ರೀಗಳನ್ನು ಸಂಭ್ರಮದ ಮೆರವಣಿಗೆಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಅಶ್ವತ್ಥಪುರ ಭೇಟಿಗೂ ಮುನ್ನ ಕಿನ್ನಿಗೋಳಿ ತಾಳಿಪಾಡಿ ಶ್ರೀ ಲಕ್ಷ್ಮೀವೆಂಕಟರಮಣ ಮಠಕ್ಕೆ ಭೇಟಿ ನೀಡಿದರು.

 

By Suddi9

Leave a Reply

Your email address will not be published. Required fields are marked *