ಒಂದು ತಿಂಗಳು ಜೈಲುವಾಸ ಶಿಕ್ಷೆ ಎಚ್ಚರಿಕೆ
ಬಂಟ್ವಾಳ : ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಕೊೈಲ ಗ್ರಾಮ ಮಾವಂತೂರು ನಿವಾಸಿ ಎಂ.ದೇವಪ್ಪ ಶೆಟ್ಟಿ ಮತ್ತು ಅವರ ಅಳಿಯ ಸುಭಾಶ್ಚಚಂದ್ರ ಶೆಟ್ಟಿ ಅವರಿಗೆ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯವು ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ ಅಪರೂಪದ ಘಟನೆ ನಡೆದಿದೆ.
ಕೊೈಲ ಗ್ರಾಮದ ಮಾವಂತೂರು ನಿವಾಸಿ ಪದ್ಮರಾಜ ಬಲ್ಲಾಳ್ ಎಂಬವರು ಇಲ್ಲಿನ ಸರ್ವೆ ನಂಬ್ರ 87-1ಎ ಸರಕಾರಿ ಜಮೀನಿನಲ್ಲಿ ರಸ್ತೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಎಂ.ದೇವಪ್ಪ ಶೆಟ್ಟಿ ಎಂಬವರು ಕಳೆದ 1994ರಲ್ಲಿ ಬಂಟ್ವಾಳ ಸಿವಿಲ್ ನ್ಯಾಯಾಲಯಕ್ಕೆ (124/94)ದಾವೆ ಹೂಡಿದ್ದರು. ಈ ದಾವೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಿಕೊಂಡು ಬರಲು ನ್ಯಾಯಾಲಯವು ಅಂದು ಮಧ್ಯಂತರ ಆದೇಶ ನೀಡಿತ್ತು . ಆ ಬಳಿಕ ನ್ಯಾಯಾಲಯದ ಆದೇಶ ಉಲ್ಲಂಘಿಸಿ ರಸ್ತೆಗೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿ ಪ್ರತಿವಾದಿ ಎಂ.ಪದ್ಮರಾಜ ಬಲ್ಲಾಳ್ ಅವರು ಕಳೆದ 2005ರಲ್ಲಿ ಮತ್ತೆ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ಬಗ್ಗೆ ಕೂಲಂಕುಶ ತನಿಖೆ ನಡೆಸಿದ ನ್ಯಾಯಾಲಯವು ಒಂದು ತಿಂಗಳೊಳಗೆ ರಸ್ತೆ ತಡೆ ತೆರವುಗೊಳಿಸಬೇಕು ಎಂದು ಎಂ.ದೇವಪ್ಪ ಶೆಟ್ಟಿ ಮತ್ತು ಅವರ ಅಳಿಯ ಸುಭಾಶ್ಚಚಂದ್ರ ಶೆಟ್ಟಿಗೆ ಆದೇಶಿಸಿದೆ. ಇದಕ್ಕೆ ತಪ್ಪಿದಲ್ಲಿ ನ್ಯಾಯಾಲಯ ಆದೇಶ ಉಲ್ಲಂಘನೆಗಾಗಿ ಒಂದು ತಿಂಗಳು ಜೈಲುವಾಸ ಶಿಕ್ಷೆ ವಿಧಿಸಿ ನ್ಯಾಯಾಧೀಶ ಜಯಪ್ರಕಾಶ್ ಡಿ.ಆರ್. ಆದೇಶಿಸಿದ್ದಾರೆ ಎಂದು ಎಂ.ಪದ್ಮರಾಜ ಬಲ್ಲಾಳ್ ಪರವಾದ ಮಂಡಿಸಿದ ನ್ಯಾಯವಾದಿಗಳಾದ ಕಜೆ ರಾಮಚಂದ್ರ ಭಟ್ ಮತ್ತು ಕಜೆ ನರಸಿಂಹ ಭಟ್ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
