ಬಂಟ್ವಾಳ :ಭವಿಷ್ಯದಲ್ಲಿ ಸ್ವ-ಉದ್ಯೊಗವನ್ನು ಸೃಷ್ಟಿಸಿ ಇತರರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ವಿದ್ಯಾರ್ಥಿಗಳು ಸಶಕ್ತರಾಗಬೇಕು. ಆತ್ಮವಿಶ್ವಾಸವನ್ನು ರೂಢಿಸಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಕನಿಷ್ಠ ಸಮಯದಲ್ಲಿ ಗುರಿಮುಟ್ಟಲು ಸಾಧ್ಯ ಎಂದು ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಪ್ರೊ. ಲೂಯಿಸ್ ಮನೋಜ್ ಎಂಬ್ರೋಸ್ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಪ್ರಬೋಧ ವಾಣಿಜ್ಯ ಸಂಘದ ವತಿಯಿಂದ ನಡೆದ “ಸಮರ್ಥ್ -2015” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಜೀವನದಲ್ಲಿ ಒಳ್ಳೆಯ ಅವಕಾಶಗಳು ಬಂದಾಗ ಅದನ್ನು ಸದುಪಯೋಗ ಮಾಡಿದರೆ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ. ಅಧ್ಯಯನದಲ್ಲಿ ನಿಶ್ಚಿತ ಗುರಿ ಇದ್ದರೆ ಕಲಿತ ವಿದ್ಯೆಯೇ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಚಾಲಕ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಅವಕಾಶಗಳು ನಮ್ಮ ಮನೆಯ ಬಾಗಿಲನ್ನು ತಟ್ಟಿದಾಗ ಅದನ್ನು ಉಪಯೋಗಿಸಿಕೊಳ್ಳಬೇಕು, ಹೊರತು ಅದನ್ನು ಬಿಟ್ಟು ಬಿಡಬಾರದು ಎಂದರು.
ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ ಕಟ್ಟೆ ಉಪಸ್ಥಿತರಿದ್ದರು. ವಿದ್ಯಾರ್ಥಿ ನವೀನ್ ಸ್ವಾಗತಿಸಿ, ನವ್ಯ ವಂದಿಸಿ, ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಅಂತರ್ ತರಗತಿಗಳ ಕಾಮರ್ಸ್ ಫೆಸ್ಟ್‍ನಲ್ಲಿ ಬೆಸ್ಟ್ ಮ್ಯಾನೇಜರ್, ಫಿನಾನ್ಸ್, ಮಾರ್ಕೆಟಿಂಗ್, ಐಸ್ ಬ್ರೇಕರ್, ಬಿಸಿನೆಸ್ ಕ್ವಿಜ್ ಸ್ಪರ್ಧೆಗಳು ನಡೆಯಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಸ್ವಾಮಿ ವೆಂಕಟ್ರಮಣ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತರಾಮ ಮಯ್ಯ ಮಾತನಾಡಿ ಶಿಕ್ಷಣದಲ್ಲಿ ಜ್ಞಾನದ ಅರಿವು ಅತ್ಯಂತ ಅಗತ್ಯವಾದುದು ಅದಲ್ಲದೆ ಇತರ ಚಟುವಟಿಕೆಗಳು ಕೂಡಾ ಶಿಕ್ಷಣದ ಮೌಲ್ಯವನ್ನು ಹೆಚ್ಚಿಸಿ ಉದ್ಯೋಗದಲ್ಲಿ ಸಹಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಿಮಾಂಶುರವರು ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

