ಬಂಟ್ವಾಳ: ಇಲ್ಲಿನ ಪುರಸಭೆಯ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿಯ ವಿರುದ್ದ ಈ ಸಭೆಯಲ್ಲೂ ಸರ್ವ ಸದಸ್ಯರು ತಮ್ಮ ಅಸಮಾಧಾನ ತೋರ್ಪಡಿಸಿಕೊಂಡಿದ್ದಾರೆ. ಸಭೆಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಜಿಲ್ಲಾಧಿಕಾರಿ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ ಘಟನೆಗೂ ಸಾಮಾನ್ಯ ಸಭೆ ಸಾಕ್ಷಿಯಾಯಿತು.


ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಹಿಂದಿನ ಸಭೆಯ ನಿರ್ಣಯಗಳನ್ನು ಸ್ಥಿರೀಕರಿಸುವ ವೇಳೆ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಟೆಂಡರ್ ಕರೆಯಲು ಜಿಲ್ಲಾಧಿಕಾರಿಯು ಇನ್ನೂ ಆಡಳಿತಾತ್ಮಕ ಮಂಜೂರಾತಿ ನೀಡದಿರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರು. ಜಿಲ್ಲಾಧಿಕಾರಿಯ ಸೂಚನೆಯಂತೆ ಯೋಜನಾ ನಿರ್ದೇಶಕರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಸಿ 15 ದಿನ ಕಳೆದರೂ ಆಡಳಿತಾತ್ಮಕ ಮಂಜೂರಾತಿ ನೀಡದಿರುವ ಜಿಲ್ಲಾಧಿಕಾರಿಯವರಿಗೆ ಬಂಟ್ವಾಳದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಗೊಳ್ಳಬಾರದು ಎಂಬ ಉದ್ದೇಶವಿರುವುದು ಇದರಿಂದ ಸ್ಪಷ್ಟಗೊಂಡತ್ತಾಗಿದೆ ಎಂದು ಸದಸ್ಯರು ಗಂಭೀರವಾಗಿ ಆರೋಪಿಸಿದರು.
ಕಸ ವಿಲೆವಾರಿ ಸಮಸ್ಯೆಗೆ ಪರಿಹಾರ ಸಿಗದೆ ಮುಂದಿನ ವಿಷಯದ ಬಗ್ಗೆ ಚರ್ಚೆ ನಡೆಸುವುದು ಬೇಡ. ಸಭೆಯನ್ನು ಇಲ್ಲಿಗೆ ಮೊಟಕುಗೊಳಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುವ ಎಂದು ಆಡಳಿತ ಪಕ್ಷ ಸದಸ್ಯ ಸದಾಶಿವ ಬಂಗೇರ ತನ್ನ ಅಸಮಾಧನವನ್ನು ವ್ಯಕ್ತಪಡಿಸಿಕೊಂಡರೆ, ಕಸ ಸಮಸ್ಯೆ ಪರಿಹಾರಕ್ಕಾಗಿ ಸಾಮಾನ್ಯ ಸಭೆಯಲ್ಲಿ ಮಾತ್ರವಲ್ಲದೆ ತರ್ತು ಸಭೆ, ವಿಶೇಷ ಸಭೆಯನ್ನು ಮಾಡಲಾಗಿದೆ. ಆದರೆ ಜಿಲ್ಲಾಧಿಕಾರಿ ಇದಕ್ಕೆ ಯಾವ ರೀತಿಯ ಸ್ಪಂದನೆ ನೀಡಿದ್ದಾರೆ ಎಂದು ವಿಪಕ್ಷ ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರೆ ಕಾರ್ಯಕ್ರಮವೊಂದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಹಾಗೂ ನಗರಾಭಿವೃದ್ದಿ ಸಚಿವ ವಿನಯ್ ಕುಮಾರ್ ಸೊರಕೆಯವರೇ ಕಂಚಿನಡ್ಕ ಪದವಿನ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕಿದ್ದ ಅಡೆತಡೆಗಳು ನಿವಾರಣೆಯಾಗಿದೆ ಎಂದು ಹೇಳಿಕೆ ನೀಡಿದ್ದರೂ ಅದನ್ನು ಪಾಲಿಸದ ಜಿಲ್ಲಾಧಿಕಾರಿ ವಿರುದ್ದ ಕ್ರಮ ಕೈಗೊಳ್ಳುವವವರು ಯಾರು? ಎಂದು ದೇವದಾಸ ಶೆಟ್ಟಿ ಧ್ವನಿಗೂಡಿಸಿದರು. ಸದಸ್ಯರಾದ ಚಂಚಲಾಕ್ಷಿ, ಮೊನೀಶ್ ಅಲಿ ಬೆಂಬಲವಾಗಿ ಮಾತನಾಡಿದರು. ಈ ನಡುವೆ ಆಡಳಿತ ಪಕ್ಷದ ಸದಸ್ಯ ಮಹಮ್ಮದ್ ನಂದರಬೆಟ್ಟು ಎಂಜಿನಿಯರ್ ಪ್ರಭಾದೇವಿಯವರನ್ನು ರಕ್ಷಿಸುವ ಭರದಲ್ಲಿ ಜಿಲ್ಲಾಧಿಕಾರಿಯ ಪರ ವಹಿಸಿ ಮಾತನಾಡಿದ್ದು ಎಲ್ಲಾ ಸದಸ್ಯರ ಕಣ್ಣು ಕೆಂಪಾಗುವಂತೆ ಮಾಡಿತು. ಸದಸ್ಯರಾದ ಸದಾಶಿವ ಬಂಗೇರಾ ಹಾಗೂ ಗೋವಿಂದ ಪ್ರಭು ಮಹಮ್ಮದ್ ನಂದರಬೆಟ್ಟು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ನೀವು ಪುರಸಭಾ ಸದಸ್ಯರು. ಪುರಸಭೆಯ ಪರವಾಗಿ ಮಾತನಾಡಿ. ಜಿಲ್ಲಾಧಿಕಾರಿಯ ಪರವಹಿಸಿ ಮಾತನಾಡುವುದು ಬೇಡ ಎಂದರು. ಈ ಸಂದರ್ಭ ತನ್ನ ಮಾತಿನ ದಾಟಿಯನ್ನು ಬದಲಿಸಿದ ಮಹಮ್ಮದ್ ಬೇಗ ಸಭೆ ಮುಗಿಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಎಂದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರು. ವಿಪಕ್ಷ ಸದಸ್ಯ ಗೋವಿಂದ ಪ್ರಭು ಅಧ್ಯಕ್ಷರ ನಿಷ್ಕ್ರೀಯತೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದ್ದು ಅಧ್ಯಕ್ಷೆ ವಸಂತಿ ಸಿ ಕೆಣಕುವಂತೆ ಮಾಡಿತು. ಅಂತಿಮವಾಗಿ ಸರ್ವ ಸದಸ್ಯರು ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಎನ್ನುತ್ತಾ ಎದ್ದು ನಿಂತರಾದರೂ ಸಭಾಂಗಣದಿಂದ ಹೊರಗೆ ಹೆಜ್ಜೆ ಇಡುವ ಧೈರ್ಯ ಯಾರೂ ತೋರಲಿಲ್ಲ.






