ಮಂಗಳೂರು/ಉಡುಪಿ: ಎಸೆಸ್ಸೆಲ್ಸಿ ಪರೀಕ್ಷೆ ಮಾ. 30ರಿಂದ ಎ.13ರವರೆಗೆ ದ.ಕ. ಜಿಲ್ಲೆಯ 100 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 36514 ಮಂದಿ ಮತ್ತು ಉಡುಪಿ ಜಿಲ್ಲೆಯ 58 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 17,112 ಮಂದಿ ಪರೀಕ್ಷೆ ಬರೆಯಲಿದ್ದಾರೆ.

ದ.ಕ. ಜಿಲ್ಲೆಯಲ್ಲಿ 33,337 ಶಾಲಾ ವಿದ್ಯಾರ್ಥಿಗಳು, 865 ಖಾಸಗಿ ಅಭ್ಯರ್ಥಿ ಹಾಗೂ 1,825 ಶಾಲಾ ಪುನರಾವರ್ತಿತ ಅಭ್ಯರ್ಥಿಗಳಾಗಿ ಮತ್ತು 427 ಮಂದಿ ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 8,922 ಬಾಲಕರು, ಹಾಗೂ 8,190 ಬಾಲಕಿಯರು ಪರೀಕ್ಷೆಗೆ ಹಾಜರಾಗಲಿದ್ದು ಇವರಲ್ಲಿ 16,057 ಹೊಸ ವಿದ್ಯಾರ್ಥಿಗಳು, 427 ಖಾಸಗಿ ಅಭ್ಯರ್ಥಿಗಳು, 628 ಪುನರಾವರ್ತಿತರು.
ಬೆಳಗ್ಗೆ 9.30ಕ್ಕೆ ಪರೀಕ್ಷೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಪರೀಕ್ಷೆ ಆರಂಭಕ್ಕೆ ಅರ್ಧ ಗಂಟೆಯ ಮೊದಲು ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ಪ್ರಶ್ನೆಪತ್ರಿಕೆ ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು ಜಿಲ್ಲೆಯಲ್ಲಿ ಒಟ್ಟು 30 ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇಲ್ಲವಾದರೂ ಪೋಲೀಸ್ ಬಂದೋಬಸ್ತ್ ಎಲ್ಲ ಕೇಂದ್ರಗಳಿಗೂ ಒದಗಿಸಲಾಗಿದೆ. ಅಲ್ಲದೆ, ಹತ್ತಿರದ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು, ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇದಾಜ್ಞೆ ಜಾರಿಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಎಸೆಸ್ಸೆಲ್ಸಿಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯವಿರುವ ಮಕ್ಕಳಿಗೆ ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸಲು ಶುಶ್ರೂಷಕರನ್ನು ನಿಯೋಜಿಸಲಾಗುತ್ತಿದೆ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆಸನದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಇತ್ಯಾದಿ ವ್ಯವಸ್ಥೆಗಳನ್ನು ಮಾಡುವಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಹಾಗೂ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗದಂತೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂಗೆ ತಿಳಿಸಲಾಗಿದೆ.
