ಉಳ್ಳಾಲ: ತೊಕ್ಕೊಟ್ಟುವಿನಲ್ಲಿ 3.5 ವರ್ಷದ ಮಗವಿನ ಮೇಲೆ ಲೈಂಗಿಕ ಶೋಷಣೆ ನಡೆದಿರುವುದು ಅತ್ಯಂತ ಹೀನ ಕೃತ್ಯ. ಇದರಿಂದ ಬುದ್ಧಿವಂತರ ಜಿಲ್ಲೆಗೆ ಅಪಮಾನ ಮಾಡಿದಂತಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಕೃತ್ಯದ ಬಗ್ಗೆ ಮಾತನಾಡದೇ ಇರುವುದು ಅವರ ಕಾಯವೈಖರಿಯನ್ನು ತೋರಿಸುತ್ತದೆ ಎಂದು ಎಸ್ ಎಸ್ ಎಫ್ ರಾಜ್ಯ ಸದಸ್ಯ ಕೆ.ಎಂ.ಸಿದ್ದೀಖ್ ಮೋಂಟುಗೋಳಿ ಹೇಳಿದ್ದಾರೆ. ಅವರು ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಎಸ್ ಎಸ್ ಎಫ್ ಉಳ್ಳಾಲ ಡಿವಿಷನ್ ವತಿಯಿಂದ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದಬ್ಬಾಳಿಕೆಯ ವಿರುದ್ಧ, ಕೋಮು ದ್ವೇಷದ ವಿಷ ಬೀಜ ಬಿತ್ತುವುದನ್ನು ಖಂಡಿಸಿ, ಮುಗ್ಧ ಹೆಣ್ಣು ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ, ಅಲ್ಪಸಂಖ್ಯಾತರ ಆರಾಧನಾಲಯಗಳ ಮೇಲೆ ನಡೆಯುವ ದಾಳಿಗಳ ವಿರುದ್ಧ ಬುಧವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾನವೀಯ ಮೌಲ್ಯಗಳ ಮೇಲೆ ದಬ್ಬಾಳಿಕೆ, ನೈತಿಕ ಪೊಲೀಸ್ಗಿರಿ, ಲೈಂಗಿಕ ಶೋಷಣೆಗಳು ಮನುಷ್ಯರ ನಡುವೆ ಕೋಮುದ್ವೇಷ ಸೃಷ್ಟಿಸುವ ಹುನ್ನಾರದಿಂದ ನಡೆಯುತ್ತಿದೆ. ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭವನ್ನು ಮುಂದಿಟ್ಟು ಬಜಪೆ ಮಸೀದಿಗೆ ಹಾನಿ, ಪಾನೀರು ಚರ್ಚ್ನ ಮೇಲಿನ ದಾಳಿ, ಅನೈತಿಕ ಪೊಲೀಸ್ಗಿರಿಯಿಂದ ಮುಡಿಪು ಕಾಲೇಜು ವಿದ್ಯಾರ್ಥಿಗಳ ಪ್ರವಾಸ ರದ್ದು, ಸಾಂಬಾರುತೋಟ ಮಸೀದಿಗೆ ಹಾನಿ ಹೀಗೆ ಮನುಷ್ಯರನ್ನು ವಿಭಜನೆ ನಡೆಸಿ ಮತ ಪಡೆಯುವ ಸಂಚು ನಡೆಯುತ್ತಿದೆ. ಕೋಮುವಾದಿಗಳಿಂದ ಶೋಷಣೆಗೊಳಗಾದವರ ಮುತುವರ್ಜಿ ಜಿಲ್ಲಾಡಳಿತದಿಂದ ಆಗಬೇಕಿದೆ. ದೇವಸ್ಥಾನದಲ್ಲಿ ದನದ ರುಂಡ ಇಡುವುದು, ಮಸೀದಿಗಳಲ್ಲಿ ಹಂದಿ ಮಾಂಸ ಇಡುವುದು ಆರಾಧನಾಲಯಗಳನ್ನೇ ಗುರಿಯಾಗಿಸಿ ದಾಳಿ ನಡೆಸುವವರಿಗೆ ಎಸ್ ಎಸ್ ಎಫ್ ಎಂದಿಗೂ ಬೆಂಬಲಿಸುವುದಿಲ್ಲ. ಧರ್ಮದ ಬಗೆಗಿನ ತಿಳುವಳಿಕೆಯ ಕೊರತೆಯಿಂದ ದುಷ್ಕರ್ಮಿಗಳು ನೀಚ ಕೃತ್ಯಗಳನ್ನು ಎಸಗುತ್ತಿದ್ದಾರೆ. ಬುದ್ಧಿವಂತರೇ ಇಂತಹವರ ವಿರುದ್ಧ ಹೋರಾಡಬೇಕಿದೆ ಎಂದ ಅವರು 3.5 ವರ್ಷದ ಶಾಲಾ ವಿದ್ಯಾರ್ಥಿನಿ ಮೇಲೆ ವಾಹನ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿರುವುದು ಜಿಲ್ಲೆಗೆ ಅಪಮಾನ ಎಸಗಿದಂತಾಗಿದೆ. ವಿದ್ಯಾರ್ಥಿನಿ ಹೆತ್ತವರ ಪರ ನಿಲ್ಲಬೇಕಾದ ಶಾಲೆ, ವಿದ್ಯಾರ್ಥಿನಿಗೆ ಶಾಲೆಯ ಕುರ್ಚಿ ತಾಗಿದೆ ಅನ್ನುವ ವಿಚಾರವನ್ನು ಮುಂದಿಟ್ಟು ಅತ್ಯಾಚಾರಿಗಳ ಪರ ವಹಿಸುತ್ತಿದೆ. ಯಾವುದೇ ಕಾನೂನನ್ನು ಪಾಲಿಸದ ಅಂತರಾಷ್ಟ್ರೀಯ ಹೆಸರಿಟ್ಟುಕೊಂಡಿರುವ ಖಾಸಗಿ ಶಾಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನ ಶಾಲೆಯಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ಶೋಷಣೆ ನಡೆದಾಗ , ಶಾಲೆಯನ್ನು ಮೂರು ತಿಂಗಳ ಕಾಲ ಬಂದ್ ಮಾಡಲಾಗಿತ್ತು. ಅದೇ ಕ್ರಮವನ್ನು ಚೆಂಬುಗುಡ್ಡೆ ಮಂಗಳೂರು ಒನ್ ಶಾಲೆ ಮೇಲೆ ತೆಗೆದುಕೊಳ್ಳಬೇಕಿದೆ. ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇರುವುದರಿಂದ ಜಿಲ್ಲೆಯಾದ್ಯಂತ ನಿರಂತರ ದೌರ್ಜನ್ಯಗಳು ನಡೆಯುತ್ತಿದೆ. ಜಿಲ್ಲೆಯ ಮೂವರು ಮಂತ್ರಿಗಳು ನಿಷ್ಕ್ರಿಯರಾಗಿದ್ದಾರೆ. ಆರೋಗ್ಯ ಮಂತ್ರಿಗಳ ಕ್ಷೇತ್ರದಲ್ಲಿ ಅನಾರೋಗ್ಯದ ವಾತಾವರಣ ನಿರ್ಮಾಣವಾಗಲು ಅವರ ವಿರುದ್ಧದ ಷಡ್ಯಂತ್ರವೇ ಅಥವಾ ಆಡಳಿತ ನಿಯಂತ್ರಣ ಕಳೆದುಕೊಂಡಿದ್ದಾರೋ? ಅನ್ನುವ ಪ್ರಶ್ನೆ ಮೂಡುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೆಣ್ಮಕ್ಕಳಿಗೆ ಬೇರೆಯೇ ಶಾಲೆಯ ಅಗತ್ಯ ಇದೆ. ಪಾಕಿಸ್ತಾನದ ಪರ ಘೋಷಣೆ ಕೂಗುವವರಿಗೂ ಮತ್ತು ಅಲ್ಲಿಗೆ ಹೋಗಲು ಹೇಳುವವರಿಗೂ ಎಸ್ ಎಸ್ ಎಫ್ ನ ಧಿಕ್ಕಾರವಿದೆ. ಉಪ್ಪಿನಂಗಡಿ ಯುವತಿಗೆ ಪೀಡನೆ, ಫೇಸ್ ಬುಕ್ಕಿನಲ್ಲಿ ಪ್ರವಾದಿಗೆ ನಿಂದನೆ, ಉಳ್ಳಾಲದಲ್ಲಿ ಅನೈತಿಕ ಪೊಲೀಸ್ಗಿರಿಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ಭಾರತದಲ್ಲಿ ಹುಟ್ಟಿದ ಮುಸ್ಲಿಮರು, ದೇಶದ ರಕ್ಷಣೆಗೆ ಪಾಕಿಸ್ತಾನದ ವಿರುದ್ಧ ಎಲ್ಲಾ ರೀತಿಯಲ್ಲೂ ಹೋರಾಟಕ್ಕೂ ಸಿದ್ಧ. ಕೆಲ ಕಿಡಿಗೇಡಿಗಳು ನಡೆಸುವ ಕೃತ್ಯಕ್ಕೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ತಪ್ಪು. ಮುಸಲ್ಮಾನರನ್ನು ಎಂದಿಗೂ ತಪ್ಪು ತಿಳಿಯಬೇಡಿ ಎಂದರು. ಎಸ್ ಎಸ್ ಎಫ್ ಜಿಲ್ಲಾ ಅಧ್ಯಕ್ಷ ಯಾಕೂಬ್ ಸಅದಿ ನಾವೂರು, ಎಸ್ ಎಸ್ ಎಫ್ ರಾಜ್ಯ ಸದಸ್ಯರಾದ ಇಸ್ಮಾಯಿಲ್ ಸಅದಿ ಕಿನ್ಯಾ, ಎಸ್ ಎಸ್ ಎಫ್ ಜಿಲ್ಲಾ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮನೆ, ಎಸ್ ಎಸ್ ಎಫ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ರಜ್ವಿ ಕಲ್ಕಟ್ಟ, ಎಸ್ ಎಸ್ ಎಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಉಮರ್ ಅಹ್ಸನಿ, ಇಸ್ಮಾಯಿಲ್ ಮಾಸ್ತರ್, ಅಲ್ತಾಫ್ ಕುಂಪಲ, ರಫೀಕ್ ಕೆ.ಸಿ.ಎಫ್, ಮುನೀರ್ ಸಖಾಫಿ, ಫಾರೂಕ್ ಸಖಾಪಿ, ಜಮಾಲುದ್ದೀನ್ ಸಖಾಫಿ, ಸಮದ್ ಅಹ್ಸನಿ, ಜಾಫರ್ ಯು. ಮೊದಲಾದವರು ಉಪಸ್ಥಿತರಿದ್ದರು.



