ಉಳ್ಳಾಲ: ಮೂರುವರೆ ವರ್ಷದ ಮಗುವಿನ ಅತ್ಯಾಚಾರ ಯತ್ನ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ತೊಕ್ಕೊಟ್ಟು ಖಾಸಗಿ ಶಾಲೆಯ ವಾಹನದ ಚಾಲಕನನ್ನು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಉದ್ರಿಕ್ತ ಗುಂಪು ಬಸ್ಸಿಗೆ , ಪೊಲೀಸ್ ವಾಹನಕ್ಕೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ ಪರಿಣಾಮ ಶುಕ್ರವಾರ ಸಂಜೆಯಿಂದ ಉಳ್ಳಾಲ ಹಾಗೂ ತೊಕ್ಕೊಟ್ಟು ವ್ಯಾಪ್ತಿಯಲ್ಲಿ ಅಘೋಷಿತ ಬಂದ್ ನ ವಾತಾವರಣ ನಿರ್ಮಾಣವಾಯಿತು.
ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಮಂಗಳೂರು ಒನ್ ಶಾಲೆಯ ನರ್ಸರಿ ವಿಭಾಗದ ಮೂರೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಯತ್ನ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿ ಅದೇ ಶಾಲೆಯ ವಾಹನದ ಚಾಲಕ ಕುಂಪಲ ನಿವಾಸಿ ಮಧುಕರ್ (35) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಘಟನೆ ವಿವರ: ಗುರುವಾರ ವ ಮಧ್ಯಾಹ್ನ ನರ್ಸರಿ ಭಾಗದ ಮಕ್ಕಳನ್ನು ಶಾಲಾ ವಾಹನದಲ್ಲಿ ಮಧುಕರ್ ಮನೆಗೆ ತಲುಪಿಸಲು ಕೊಂಡೊಯ್ದಿದ್ದರು. ಮಾಡೂರು ನಿವಾಸಿ ಮಗುವನ್ನು ಬಿಟ್ಟು ಮರಳಿ ಶಾಲೆಗೆ ವಾಪಸ್ಸಾಗಿದ್ದರು. ಮಧ್ಯಾಹ್ನ 3.00 ಗಂಟೆ ಸಮಯ 5 ಕ್ಕೂ ಅಧಿಕ ಮಂದಿಯಿದ್ದ ತಂಡ ಶಾಲೆಗೆ ಆಗಮಿಸಿ ಮಧುಕರ್ ಗೆ ಗಂಭೀರವಾಗಿ ಥಳಿಸಿದ್ದು, ವಿಷಯ ತಿಳಿದ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿತ ಮಧುಕರ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಲ್ಲೆ ನಡೆಸಿದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಗುವನ್ನು ತೊಕ್ಕೊಟ್ಟು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಮತ್ತೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಆರೋಪ: ಶಾಲಾ ವಾಹನ ಚಾಲಕ ಮಗುವನ್ನು ಮನೆಯಲ್ಲಿ ಬಿಟ್ಟ ಬಳಿಕ ಮಂಕಾಗಿ ವರ್ತಿಸುತಿತ್ತು. ಮಾತನಾಡಿಸಿದಾಗಲೂ ಎಂದಿನಂತೆ ಮಾತನಾಡುತ್ತಿರಲಿಲ್ಲ. ಬಳಿಕ ಮೂತ್ರ ಮಾಡುವಾಗ ನೋವು ಕಂಡುಬಂದಿದ್ದನ್ನು ಹೇಳಿತು. ಈ ವೇಳೆ ಮಗುವಿನ ಗುಪ್ತಾಂಗದಲ್ಲಿ ಮತ್ತು ಒಳಉಡುಪಿನಲ್ಲಿ ರಕ್ತದ ಕಲೆ ಇತ್ತು. ಅದರಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೆತ್ತವರು ತಿಳಿಸಿದ್ದಾರೆ.
ಆರೋಪದಲ್ಲಿ ಶಂಕೆ: ಮಗು ಶಾಲೆಯಲ್ಲಿ ಕುರ್ಚಿಯಿಂದ ಏಳುವ ಸಂದರ್ಭ ಮಗುವಿನ ಜನನಾಂಗಗಕ್ಕೆ ತಾಗಿತ್ತು. ಈ ಬಗ್ಗೆ ಶಾಲೆಯ ಆಯಾಗಳು ಅಲ್ಲಿಯೇ ಪರೀಕ್ಷೆ ನಡೆಸುವಾಗ ಜನನಾಂಗದ ಹೊರಭಾಗದಲ್ಲಿ ಗಾಯವಾಗಿತ್ತು. ಆ ಬಳಿಕ ಮಗು ಆಟವಾಡುತ್ತಿದ್ದರಿಂದ ಹಾಗೇ ಬಿಟ್ಟು ಬಳಿಕ ಮನೆಗೆ ಕಳುಹಿಸಲಾಗಿತ್ತು ಎಂಬ ಮಾತುಗಳು ಶಾಲಾ ಆಡಳಿತ ಮಂಡಳಿಯಿಂದ ಕೇಳಿಬಂದಿದೆ.
ಗುಂಪಿನಿಂದ ದಾಂಧಲೆ : ಘಟನೆ ಸುದ್ಧಿಯಾಗುತ್ತಿದ್ದಂತೆ ತೊಕ್ಕೊಟ್ಟು ಖಾಸಗಿ ಆಸ್ಪತ್ರೆ ಮುಂದೆ 100ಕ್ಕೂ ಅಧಿಕ ಮಂದಿ ಜಮಾಯಿಸಿದ್ದರು. ಚಿತ್ರೀಕರಿಸಲು ತೆರಳಿದ ಮಾಧ್ಯಮದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗುಂಪು ಹಲ್ಲೆಗೆ ಮುಂದಾಗಿತ್ತು. ಕೂಡಲೇ ಉಳ್ಳಾಲ ಪೊಲೀಸರು ಲಾಠಿಚಾರ್ಜ್ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಿದರು. ಸ್ಥಳದಿಂದ ಚದುರಿದ ತಂಡ ಮತ್ತೆ ಗುಂಪಾಗಿ ರಾ.ಹೆ.66ರಲ್ಲಿ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಗೆ ಕಲ್ಲೆಸೆದು ಗಾಜು ಪುಡಿಗೈದಿದ್ದಾರೆ. ಮತ್ತೆ ಉಳ್ಳಾಲ ಪಿಎಸ್ ಐ ಭಾರತಿ ಅವರ ವಾಹನಕ್ಕೂ ಕಲ್ಲೆಸೆದಿದ್ದು, ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಇದರಿಂದ ತೊಕ್ಕೊಟ್ಟು ಭಾಗದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಯಿತು. ಮತ್ತೆ ಉಳ್ಳಾಲ ಪೊಲೀಸ್ ಠಾಣೆಯೆದುರು ಗುಂಪು ಸೇರಿ ಗಲಾಟೆ ನಡೆಸಲು ಆರಂಭಿಸಿದಾಗ ಪೊಲೀಸರು ಅಲ್ಲಿ ಲಾಠಿ ಚಾರ್ಜ್ ನಡೆಸಿದರು. ಅಲ್ಲಿಯೂ ರಾತ್ರಿ 8.00 ಹೊತ್ತಿಗೆ ಅಂಗಡಿಗಳನ್ನು ಮುಚ್ಚಿ ಅಘೋಷಿತ ಬಂದ್ ನ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಹಾಗೂ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ಪೊಲೀಸ್ ಆಯುಕ್ತರಾದ ಮುರುಗನ್, ಡಿಸಿಪಿ ವಿಷ್ಣುವರ್ದನ್ ಭೇಟಿ ನೀಡಿದ್ದಾರೆ. ಎಸಿಪಿ ಕಲ್ಯಾಣ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸವಿತ್ರು ತೇಜ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಎರ್ಪಡಿಸಲಾಗಿದೆ.



