ದುರ್ಬಳಕೆಯಿಂದ ಕಾನೂನು ಸಡಿಲ: ಶ್ವೇತಾ ಜೈನ್
ಮೂಡುಬಿದರೆ: ತಾಂತ್ರಿಕವಾಗಿ ಮುಂದುವರೆದಿರುವ ಇತರ ದೇಶಗಳಲ್ಲಿ ಕಠಿಣ ಕಾನೂನುಗಳಿರುವುದರಿಂದ ಅಪರಾಧಗಳು ಕಡಿಮೆಯಿದೆ. ನಮ್ಮ ದೇಶದಲ್ಲಿ ಉತ್ತಮ ಕಾನೂನು ವ್ಯವಸ್ಥೆಯಿದ್ದರೂ ಅದರ ದುರ್ಬಳಕೆಯಿಂದ ಕಾನೂನು ಸಡಿಲಗೊಳ್ಳುತ್ತಿದೆ. ಕಾನೂನಿನ ಸರಿಯಾದ ಬಳಕೆಯಿಂದ ಕುಟುಂಬ, ಸಮಾಜ ಹಾಗೂ ದೇಶದ ಹಿತ ಕಾಪಾಡಿಕೊಳ್ಳಬಹುದು ಎಂದು ಮೂಡುಬಿದರೆ ವಕೀಲೆ ಶ್ವೇತಾ ಜೈನ್ ತಿಳಿಸಿದರು.
mbd_march3_5
ಕಾನೂನು ಸಾಕ್ಷರತಾ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನದ ಪ್ರಯುಕ್ತ ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೂಡುಬಿದರೆ ವಕೀಲರ ಸಂಘ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ಆಶ್ರಯದಲ್ಲಿ ಮಂಗಳವಾರ ಸಮಾಜಮಂದಿರದಲ್ಲಿ ನಡೆದ `ಮಹಿಳೆ ಹಾಗೂ ದೌರ್ಜನ್ಯ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಕೌಟುಂಬಿಕ ದೌರ್ಜನ್ಯ ಕಾಯ್ದೆ ಹಾಗೂ ಫೋಕ್ಸೊ ಕಾಯ್ದೆ ಮಹಿಳೆಯರಿಗೆ ದೌರ್ಜನ್ಯ ತಡೆಯಲಿರುವ ವಿಶೇಷ ಕಾನೂನುಗಳು. ಈ ಕಾಯ್ದೆಗಳನ್ನು ಮಹಿಳೆಯರ ಹಿತರಕ್ಷಣಾಗೋಸ್ಕರ ಬಳಸಬೇಕೇ ಹೊರತು ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡಲಲ್ಲ. ಕಾನೂನು ವ್ಯವಸ್ಥೆ ಪೂರಕವಾಗಿ ನಮ್ಮ ಮನಸ್ಸನ್ನು ಪರಿವರ್ತನೆ ಮಾಡಬೇಕು. ಕಾನೂನು ಜ್ಞಾನದ ಜೊತೆಗೆ ಸಂಸ್ಕಾರವಿದ್ದರೆ ಇತರರಿಗೆ ತೊಂದರೆಯಾದ ರೀತಿಯಲ್ಲಿ ಬದುಕಬಹುದು ಎಂದು ಅಭಿಪ್ರಾಯಪಟ್ಟರು.
ಮೂಡುಬಿದರೆ ವಕೀಲರ ಸಂಘದ ಅಧ್ಯಕ್ಷ ಕೆ.ಆರ್ ಪಂಡಿತ್ ಕಾರ್ಯಕ್ರಮ ಉದ್ಘಾಟಿಸಿ, ಬದುಕಿನ ಪ್ರತಿಹಂತದಲ್ಲೂ ಕಾನೂನು ಅವಶ್ಯಕ. ಕಾನೂನಿನ ತಿಳುವಳಿಕೆಯಿದ್ದರೆ ಸೂಕ್ತ ರೀತಿಯಲ್ಲಿ ನ್ಯಾಯ ಸಿಗುವುದರಲ್ಲಿ ಸಂಶಯವಿಲ್ಲ. ಸರ್ಕಾರ ಕಾನೂನು ಸುವ್ಯವಸ್ಥೆಗೆ ಜಾರಿಗೊಳಿಸುವ ಯೋಜನೆಗಳನ್ನು ಅರಿತು, ಅಳವಡಿಸಿದರೆ ಉತ್ತಮ ಎಂದರು.
ಮೂಡುಬಿದರೆ ಪುರಸಭಾ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ವಕೀಲರ ಸಂಘದ ಸ್ಥಾಪಕಾಧ್ಯಕ್ಷ ಬಾಹುಬಲಿ ಪ್ರಸಾದ್, ವಕೀಲ ಹರೀಶ್ ಉಪಸ್ಥಿತರಿದ್ದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಸ್ವಾಗತಿಸಿದರು. ಮೇಲ್ವಿಚಾರಕರಾದ ನಾಗರತ್ನ ಕಾರ್ಯಕ್ರಮ ನಿರೂಪಿಸಿ, ರತಿ ಶೆಟ್ಟಿ ವಂದಿಸಿದರು.

By Suddi9

Leave a Reply

Your email address will not be published. Required fields are marked *