ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಪದೇ ಪದೇ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಗೆ ಗ್ರಾಸವಾಗುತ್ತಿರುವ ಘಟನೆ ಪುನರಾವರ್ತನೆಗೊಂಡಿದೆ.
ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಕ್ವಾರ್ಟಸ್ ಅಂಗನವಾಡಿ ಕೇಂದ್ರ ಮುಚ್ಚಿರುವುದು.
10 ದಿನಗಳಿಂದ ನೀರಿಗೆ ಬರ, ಅಂಗನವಾಡಿ ಬಂದ್…!


ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ಎಂಬಲ್ಲಿ ಕೊಳವೆ ಬಾವಿಗೆ ಅಳವಡಿಸಲಾಗಿರುವ ಪಂಪ್ ಕಳೆದ 10 ದಿನಗಳ ಹಿಂದೆ ಕೆಟ್ಟು ಹೋಗಿದೆ. ಇದರಿಂದಾಗಿ ಮಳೆಗಾಲ-ಬೇಸಿಗೆಗಾಲ ಎಂಬ ಬೇಧವಿಲ್ಲದೆ ಎರಡು ದಿನಕ್ಕೊಮ್ಮೆ ಮಾತ್ರ ಪೂರೈಸಲಾಗುತ್ತಿದ್ದ ಕುಡಿಯುವ ನೀರು ಕಳೆದ 10 ದಿನಗಳಿಂದಲೂ ಸ್ಥಗಿತಗೊಂಡಿದೆ.
ಈ ಬಗ್ಗೆ ಸ್ಥಳೀಯ ಗ್ರಾ.ಪಂ.ಸದಸ್ಯ, ಹಾಲಿ ಉಪಾಧ್ಯಕ್ಷ ಆನಂದ ಪೂಜಾರಿ ಇವರಿಗೆ ಸ್ಥಳೀಯರು ದೂರಿಕೊಂಡಿದ್ದು, ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಕಳೆದ ಒಂದು ವಾರದ ಹಿಂದೆ ಕೊಳವೆ ಬಾವಿಯ ಎಲ್ಲಾ ಪೈಪ್ ಮೇಲೆತ್ತಿಟ್ಟು, ಬಳಿಕ ಪಂಪ್ನ್ನು ‘ವೈಂಡಿಂಗ್’ ದುರಸ್ತಿ ನೆಪದಲ್ಲಿ ಬಿ.ಸಿ.ರೋಡ್ಗೆ ಸಾಗಿಸಲಾಗಿದೆ.
ಇದೀಗ ಕಳೆದ 10 ದಿನಗಳಿಂದ ಕುಡಿಯುವ ನೀರಿನ ಪೂರೈಕೆಯಾಗದೆ ಸ್ಥಳೀಯ ಸುಮಾರು 50ಕ್ಕೂ ಮಿಕ್ಕಿ ಮನೆ ನಿವಾಸಿಗಳು ಕಂಗಾಲಾಗಿದ್ದಾರೆ. ಇದೇ ನೀರಿನ ಸಮಸ್ಯೆಯಿಂದಾಗಿ ಇಲ್ಲಿನ ಅಂಗನವಾಡಿ ಕೇಂದ್ರವೂ ಮುಚ್ಚಿಕೊಂಡಿದ್ದು, ತಾತ್ಕಾಲಿಕವಾಗಿ ಪಕ್ಕದ ಮನೆಯೊಂದಕ್ಕೆ ಸ್ಥಳಾಂತರಗೊಳಿಸಲಾಗಿದೆ. ಇದರಿಂದಾಗಿ ಪುಟ್ಟ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲೂ ಮಕ್ಕಳ ಹೆತ್ತವರು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಈ ನಡುವೆ ಸ್ಥಳೀಯರು ಬೈಕ್, ಬಾಡಿಗೆ ರಿಕ್ಷಾ ಮೂಲಕ ದೂರದ ಬಾವಿಗಳಿಂದ ನೀರು ಹೊತ್ತು ತರುತ್ತಿದ್ದರೂ ಟ್ಯಾಂಕರ್ ನೀರು ಪೂರೈಸುವ ಬದಲಿಗೆ ಪಂಚಾಯಿತಿ ಅಧಿಕಾರಿಗಳು ಮಾತ್ರ ಹಾಯಾಗಿ ಕಚೇರಿಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.
ಈ ಹಿಂದೆ ನಾಗರಿಕರು ನೀರಿನ ಬಿಲ್ಲು ಪಾವತಿಸಿಲ್ಲ ಎಂಬ ನೆಪದಲ್ಲಿ ಪಂಪ್ಹೌಸ್ಗೆ ಬೀಗ ಜಡಿದು ರಾದ್ಧಾಂತ ಉಂಟು ಮಾಡಿದ್ದ ಇಲ್ಲಿನ ಪಿಡಿಒ ವೆಂಕಟೇಶ್ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿ ವಗರ್ಾವಣೆಗೆ ಆಗ್ರಹಿಸಿದ್ದರು. ಇದೇ ವೇಳೆ ಸ್ಥಳೀಯ ಬಾಜರ್ಾರ್-ಕೈತ್ರೋಡಿ ಪೈಪ್ಲೈನ್ ಕಾಮಗಾರಿ ನಡೆಸಿ ನಿರಂತರ ನೀರು ಪೂರೈಸುವ ಭರವಸೆ ಅವರು ನೀಡಿದ್ದರೂ, ಬಳಿಕ ಆಮೆಗತಿಯಲ್ಲಿ ಕಾಮಗಾರಿ ನಡೆದು ಎಂಟು ತಿಂಗಳ ನಂತರ ಕಾಮಗಾರಿ ಪೂರ್ಣಗೊಂಡಿದೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕೈತ್ರೋಡಿ ಪೈಪ್ಲೈನ್ ಒಡೆದು ನೀರು ಪೋಲಾಗುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೌನವಹಿಸಿದ್ದರು. ಅಂದು ಎರಡು ವಾರ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಸಚಿತ್ರ ವರದಿ ಪ್ರಕಟಗೊಂಡ ಬಳಿಕ ಎಚ್ಚರಗೊಂಡಿದ್ದರು. ಇದೀಗ ಮತ್ತೆ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.
