ಬಂಟ್ವಾಳ: ತಾಲೂಕು ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ತೃತೀಯ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಅದ್ಧೂರಿಯ ಚಾಲನೆ ದೊರಕಿತು.
ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಪ್ರಶಾಂತ್ ಪುಂಜಾಲಕಟ್ಟೆ ಅವರು ತೆಂಗಿನ ಹಿಂಗಾರವನ್ನು ಅರಳಿಸಿ ಕಂಬಳಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಪ್ರಗತಿಪರ ಕೃಷಿಕ ಬಾಬು ಗೌಡ ಪೆಂರ್ಗಾಲು ಅವರು ಕಂಬಳದ ಕರೆಯನ್ನು ಉದ್ಘಾಟಿಸಿದರು.ಬಳಿಕ ಕೋಟಿ-ಚೆನ್ನಯ ಸಭಾ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಪಿಡಬ್ಲ್ಯುಡಿ ಗುತ್ತಿಗೆದಾರ ಸಾಮ್ರಾಟ್ ಅವರು ಉದ್ಘಾಟಿಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಂಬಳದ ಪ್ರಧಾನ ತೀರ್ಪುಗಾರ ಎಂ.ರಾಜೀವ ಶೆಟ್ಟಿ ಎಡ್ತೂರು ಅವರು ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಂಬಳ ನಡೆಸಲು ಸಂಪೂರ್ಣ ಸಹಕಾರದ ಭರವಸೆ ನೀಡಿದ್ದು ರಾಜ್ಯ ಮತ್ತು ಕೇಂದ್ರ ಸರಕಾರಗಳು ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಬೆಂಬಲ ನೀಡುತ್ತಿದೆ. ಆದರೂ ನ್ಯಾಯಾಲಯದ ಆದೇಶ ಮತ್ತು ಪ್ರಾಣಿ ದಯಾ ಸಂಘದ ಆಕ್ಷೇಪಗಳ ನಡುವೆ ಉಸಿರುಗಟ್ಟುವ ವಾತಾವರಣದಲ್ಲಿ ಕಂಬಳ ನಡೆಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಶೀಘ್ರ ಈ ಭಯ ದೂರವಾಗಿ ಮುಕ್ತ ವಾತಾವರಣದಲ್ಲಿ ಕಂಬಳ ನಡೆಯುವಂತಾಗಬೇಕು ಎಂದು ಅವರು ಹೇಳಿದರು.
ಸರಪಾಡಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ಚಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಆರ್ಥಿಕ ಸಂಕಷ್ಟದ ನಡುವೆಯೂ ತುಳು ಜಾನಪದ ಕ್ರೀಡೆ ಕಂಬಳದ ಉಳಿವಿಗೆ ತೀರಾ ಗ್ರಾಮೀಣ ಪ್ರದೇಶದಲ್ಲಿ ಕಂಬಳವನ್ನು ಸಂಘಟಿಸಿದ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಅಭಿನಂದಾರ್ಹರು ಎಂದು ಹೇಳಿದರು. ಬಂಟ್ವಾಳ ಉಪ ತಹಶೀಲ್ದಾರ್ ರೋಹಿನಾಥ್, ಕಜೆಕಾರು ಗ್ರಾ.ಪಂ.ಮಾಜಿ ಅಧ್ಯಕ್ಷ ಡೀಕಯ್ಯ ಬಂಗೇರ, ಉದ್ಯಮಿಗಳಾದ ನಾರಾಯಣ ಶೆಟ್ಟಿ ಕಕ್ಯ , ಮನ್ಮಥರಾಜ್ ಜೈನ್ ಪೆರಿಯಾರ್, ವಿನಯಶಾಂತಿ ಪಟ್ಲಕೆರೆ, ಸ್ಥಳದಾನಿ ತುಕ್ರಪ್ಪ ಗೌಡ, ಉಪ್ಪಿನಂಗಡಿ ದಂತವೈದ್ಯ ಡಾ|ರಾಜಾರಾಮ, ಉಳಿ ಗ್ರಾ.ಪಂ. ಸದಸ್ಯ ಚಿದಾನಂದ ರೈ , ಜಾನಪದ ಕಲಾವಿದ ವೆಂಕಪ್ಪ ಕುಂಟಾಲಪಲ್ಕೆ , ಪ್ರಗತಿಪರ ಕೃಷಿಕ ಸುಧಾಕರ ಶೆಟ್ಟಿ ಶಂಕರಬೆಟ್ಟು , ಪ್ರವೀಣ್ ಶೆಟ್ಟಿ ಕಿಂಜಾಲು, ವಿಠಲ ಭಂಡಾರಿ, ವಿನಾಯಕ ಪೈ , ಹರೀಶ್ ಕಕ್ಯ , ಅಣ್ಣಿ ಪೂಜಾರಿ, ಸುನಿಲ್ ಕುಮಾರ್, ಜಯಶೆಟ್ಟಿ ಕಿಂಜಾಲು, ಕುಸುಮಾಧರ ಉರ್ಕಿ, ಧರ್ಣಪ್ಪ ಪೂಜಾರಿ ಮೈರ, ಕೇಶವ ಪೂಜಾರಿ ಕುಕ್ಕಾಜೆ, ಶ್ರೀಧರ ಪೂಜಾರಿ, ಜಿನ್ನಪ್ಪ ಗೌಡ, ಪ್ರಧಾನ ತೀರ್ಪುಗಾರ ನಿರಂಜನ ರೈ , ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಪ್ರ.ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಕೋಶಾ„ಕಾರಿ ಸುರೇಶ್ ಮೈರ, ಶಿವಾನಂದ ಮೈರ ಅವರು ವೇದಿಕೆಯಲ್ಲಿದ್ದರು.
ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ , ನ್ಯಾಯವಾದಿ ರಂಜಿತ್ ಮೈರ ಅವರು ಸ್ವಾಗತಿಸಿದರು. ಕಂಬಳ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಸ್ತಾವಿಸಿದರು. ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ಶ್ರೀ ರಾಮಾಂಜನೇಯ ಭಜನ ಮಂದಿರದಿಂದ ಕಂಬಳದ ಕರೆಯ ವರೆಗೆ ಬ್ಯಾಂಡ್ ವಾದ್ಯ,ಕೊಂಬು ವಾಲಗ ಸಹಿತ ದ್ವಿಚಕ್ರ ವಾಹನಗಳ ಮೆರವಣಿಗೆಯಲ್ಲಿ ಓಟದ ಕೋಣಗಳನ್ನು ಕರೆತರಲಾಯಿತು. ನೂರಕ್ಕೂ ಮಿಕ್ಕಿ ಜೋಡಿ ಓಟದ ಕೋಣಗಳು ಭಾಗವಹಿಸಿದ್ದವು. ನ್ಯಾಯಾಲಯದ ನಿರ್ದೇಶನದಂತೆ ತಾಲೂಕು ಆಡಳಿತದಿಂದ ಉಪ ತಹಶೀಲ್ದಾರ್ ಹಾಗೂ ಪೆÇಲೀಸರ ಉಪಸ್ಥಿತಿಯಲ್ಲಿ ಕಂಬಳ ನಡೆಯಿತು.
