ಮಂಗಳೂರು: ಇಲ್ಲಿನ ನಂತೂರ್ ಸರ್ಕಲ್‍ನಲ್ಲಿ ಸಂಜೆ ನಡೆದ ಭೀಕರ ರಸ್ತೆ ಅಪಘಾತಕ್ಕೆ ಐವರು ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿದೆ.
ಪಂಪ್‍ವೆಲ್ ಮುಖಾಂತರ ಬಂದ ಜಲ್ಲಿ ಮಿಶ್ರಣವನ್ನು ಹೇರಿಕೊಂಡು ಬರುತ್ತಿದ್ದ ಟಿಪ್ಪರ್ ನಿಯಂತ್ರಣ ಕಳೆದುಕೊಂಡು ಮೊದಲು ಎಲೆಕ್ಟ್ರಿಕ್ ಕಂಬಕ್ಕೆ ಬಡಿದು ಆಮೇಲೆ ಆಲ್ಟೋ ಕಾರ್‍ಗೆ ಗುದ್ದಿತು, ಆಮೇಲೆ ಬೈಕ್ ಒಂದಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತು ಎನ್ನಲಾಗಿದೆ.

ಕಾರ್‍ನಲ್ಲಿ ಮೂವರು ಮಕ್ಕಳು ಹಾಗೂ ದಂಪತಿ ಇದ್ದರೆಂದು ಮಾಹಿತಿ ಲಭಿಸಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಟಿಪ್ಪರ್ ಡಿಕ್ಕಿನ ಹೊಡೆದ ಪರಿಣಾಮ ಬೈಕ್ ಸವಾರನಿಗೂ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
ಘಟನೆ ನಡೆಯುತ್ತಿದ್ದಂತೆ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಕೃಷ್ಣ(45) ಹಾಗೂ ಲಿಖಿತ್(10) ಎಂಬಿಬ್ಬರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರು ಕಾಲೇಜ್ ವಿದ್ಯಾರ್ಥಿನಿ ಹಾಗೂ ಕಾಲೇಜ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಗಾಯಾಳುಗಳ ಹಾಗೂ ಮೃತಪಟ್ಟವರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಕಾರ್‍ನಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಹರಸಾಹಸ ಮಾಡಬೇಕಾಯಿತು. ಕಾರ್‍ನಲ್ಲಿ ಗಾಯಾಳುಗಳ ಅಂಗಗಳು ಸಿಲಕಿದ್ದು ಘಟನೆಯ ಭೀಕರೆತೆಗೆ ಸಾಕ್ಷಿಯಾಗಿದೆ. ಟಿಪ್ಪರ್ ಬ್ರೇಕ್‍ಫೈಲ್ ಆಗಿತ್ತೆಂದು ಕೆಲವರು ಅಭಿಪ್ರಾಯಿಸಿದ್ದಾರೆ.
ನಂತೂರುನಲ್ಲಿ ಹಲವು ದಿನಗಳಿಂದ ಅಪಘಾತಗಳ ಮೇಲೆ ಅಪಘಾತ ನಡೆದು ಹಲವರು ಈಗಾಗಲೇ ಮೃತಪಟ್ಟಿದ್ದಾರೆ. ಸರಿಯಾದ ಟ್ರಾಫಿಕ್ ನಿಯಮ ಇಲ್ಲದಿರುವುದೇ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಇಲ್ಲಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು.
ಘಟನೆಯಲ್ಲಿ ಆಲ್ಟೋ ಕಾರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆ ನಡೆಯುತ್ತಿದ್ದಂತೆ ಜನಸಾಗರವೇ ಹರಿದು ಬರುತ್ತಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ನಜ್ಜುಗುಜ್ಜಾದ ಕಾರನ್ನು ಕ್ರೇನ್‍ನಲ್ಲಿ ಸಾಗಿಸಿಕೊಂಡು ಬರಲಾಯಿತು. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















