ಬಂಟ್ವಾಳ: ತಾಲೂಕಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಲ್ಲಿ ಒಂದಾಗಿರುವ ಬಂಟ್ವಾಳ ಭೂಅಭಿವೃದ್ಧಿ ಬ್ಯಾಂಕಿನ ಮುಂದಿನ ಅವಧಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಸುದರ್ಶನ್ ಜೈನ್ ಹಾಗೂ ಸಂಜೀವ ಪೂಜಾರಿಯವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

bank
ಗುರುವಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಅವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಚಂದ್ರಪ್ರಕಾಶ್ ಶೆಟ್ಟಿ, ಮುರಳಿಧರ್ ಶೆಟ್ಟಿ ಹೊನ್ನಪ್ಪ ನಾಯ್ಕ, ಚಂದ್ರಹಾಸ ಕರ್ಕೇರ, ಚಂದ್ರಶೇಖರ ಶೆಟ್ಟಿ, ಪರಮೇಶ್ವರ ಎಮ್, ರಾಜೇಶ್ ಬಾಳೆಕಲ್ಲು, ಶಿವಪ್ಪ ಪೂಜಾರಿ, ಪುಷ್ಪಾವತಿ, ಸುಜಾತ ರೈ ಹಾಗೂ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ ಉಪಸ್ಥಿತರಿದ್ದರು. ಬ್ಯಾಂಕಿನ ವ್ಯವಸ್ಥಾಪಕ ಶೇಖರ ಎಮ್ ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಿದ್ದರು.
ಅಲಿಖಿತ ಒಪ್ಪಂದ:
ಆದ್ಯಕ್ಷ ಸ್ಥಾನಕ್ಕೆ ಸುದರ್ಶನ್ ಹಾಗೂ ಸಂಜೀವ ಪೂಜಾರಿ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಈ ಇಬ್ಬರ ಮೇಲಾಟದಲ್ಲಿ ಅಧ್ಯಕ್ಷಗಾದಿ ನಿರ್ದೇಶಕ, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಪಾಲಾಗುವ ಸಾಧ್ಯತೆಗಳು ಕಂಡು ಬಂದಿತ್ತು. ಕಳೆದ 3 ಅವಧಿಯಿಂದ ನಿರಂತರವಾಗಿ ಸುದರ್ಶನ್ ಜೈನ್ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರಿಂದ ಇವರನ್ನು ಈ ಹುದ್ದೆಯಿಂದ ಕೆಳಗಿಳಿಸಲು ಕಾಂಗ್ರೇಸ್ ಪಕ್ಷದೊಳಗೆಯೇ ಸಿದ್ದತೆಗಳು ನಡೆದಿತ್ತು.
ಬಂಟ್ವಾಳ ಕಾಂಗ್ರೇಸ್‍ಗೆ ಹೈಕಮಾಂಡ್ ಆಗಿರುವ ಸಚಿವ ರಮಾನಾಥ ರೈಯವರು ತಾನು ಈ ವಿಚಾರದಲ್ಲಿ ಕೈಯಾಡಿಸಲಾರೆ ಏನಿದ್ದರೂ ನೀವೇ ಬಗೆಹರಿಸಿಕೊಳ್ಳಿ ಎಂದು ತಮ್ಮನ್ನು ಭೇಟಿಯಾದ ಪಕ್ಷದ ಮುಖಂಡರು ಹಾಗೂ ಬ್ಯಾಂಕಿನ ನಿರ್ದೇಶಕರುಗಳಿಗೆ ಸೂಚಿಸಿದ ಹಿನ್ನಲೆಯಲ್ಲಿ ಪಕ್ಷದ ಎರಡು ಬ್ಲಾಕ್ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ ಹಾಗೂ ಬ್ಯಾಂಕಿನ ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ರಾಜಿಸೂತ್ರ ನಡೆಸಿ ಪ್ರಥಮ ಅವಧಿಯ ಎರಡೂವರೆ ವರ್ಷಕ್ಕೆ ಸುದರ್ಶನ್ ಮತ್ತು ಸಂಜೀವ ಪೂಜಾರಿಯನ್ನು ಅದ್ಯಕ್ಷ ಉಪಾಧ್ಯಕ್ಷರಾಗಿ ಮುಂದುವರಿಯಲು ಪಕ್ಷದ ವತಿಯಿಂದ ಅಲಿಖಿತ ಒಪ್ಪಂದ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮುಂದಿನ ಎರಡೂವರೆ ವರ್ಷಕ್ಕೆ ಚಂದ್ರಪ್ರಕಾಶ್ ಶೆಟ್ಟಿರವರನ್ನು ಅಧ್ಯಕ್ಷರನ್ನಾಗಿಸಲು ಈ ಅಲಿಖಿತ ಒಪ್ಪಂದದಲ್ಲಿ ತಿಳಿಸಲಾಗಿದೆ. ಈ ತೀರ್ಮಾನಕ್ಕೆ ಸಚಿವ ರಮಾನಾಥ ರೈ ಅವರು ಕೂಡ ಅಸ್ತು ಎಂದಿದ್ದಾರೆ.

By suddi9

Leave a Reply

Your email address will not be published. Required fields are marked *