ಮಂಗಳೂರು: ಇತ್ತೀಚೆಗೆ ಬಿಜೆಪಿ ಪಾಳಯ ಸೇರಿರುವ ತೇಜಸ್ವಿನಿ ಗೌಡ ಅವರು ಜನರಿಗೆ ಒಂದು ರೂ,ಗೆ ಅಕ್ಕಿ ನೀಡುವುದು ಸಾಧನೆಯಲ್ಲ. ಬದಲಿಗೆ ಕೆಜಿಗೆ 30 ರೂ, ಅಕ್ಕಿಯನ್ನು ಖರೀದಿಸುವ ಸಾಮರ್ಥ್ಯ ಮೂಡಿಸುವುದೇ ನಿಜವಾದ ಸಾಧನೆಯೆಂದು ಹೇಳುವ ಮೂಲಕ ತಮ್ಮ ಪೂರ್ವ ಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಪುತ್ತೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಅಭಿವೃದ್ಧಿಯ ಕಲ್ಪನೆಯೇ ಇಲ್ಲದವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಹಾಗಾಗಿ ಬರೀ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ತಮಾಷೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು. ಎಡಪಂಥೀಯ ಹಿನ್ನೆಲೆಯಿಂದ ಬಂದವಳಾದರೂ ಮಾಧ್ಯಮಗಳಲ್ಲಿ ಉದ್ಯೋಗ ಮಾಡಿಕೊಂಡಿದ್ದು ನಂತರ ಕಾಂಗ್ರೆಸ್ ಮೂಲಕ ರಾಜಕೀಯ ಸೇರಿದೆ. ಅತೀಹೆಚ್ಚು ಅಂತರದಿಂದ ಕನಕಪುರ ಕ್ಷೇತ್ರದಿಂದ ಗೆದ್ದುಬಂದೆ. ನಂತರವಷ್ಟೇ ಕಾಂಗ್ರೆಸ್ ನ ಕೊಳಕು ರಾಜಕೀಯದ ದರ್ಶನವಾಯಿತು. ಅಸಲಿಗೆ 5 ವರ್ಷಗಳ ಹಿಂದೆಯೇ ಬಿಜೆಪಿ ಸೇರಬೇಕಿತ್ತು ಆದರೆ ಅದಕ್ಕೆ ಕಾಲ ಈಗ ಕೂಡಿ ಬಂದಿದೆ ಎಂದು ತೇಜಸ್ವಿನಿ ತಿಳಿಸಿದರು.
ಮಂಗಳೂರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ತೇಜಸ್ವಿನಿ, ಮುಸ್ಮಿಮರನ್ನು ಕಾಂಗ್ರೆಸ್ ವಂಚಿಸುತ್ತಿದೆ. ಕಾಂಗ್ರೆಸ್ ಮುಸ್ಲಿಮರನ್ನು ವೋಟ್ ಬ್ಯಾಂಕ್ ನಂತೆ ಪರಿಗಣಿಸುತ್ತಿದ್ದು ಜಾತ್ಯತೀತತೆಯ ಡೋಂಗಿ ರಾಜಕಾರಣ ಮಾಡುತ್ತಿದೆ. ಮುಸ್ಲಿಮರು ಕಾಂಗ್ರೆಸ್ ಕನ್ನಡಕ ಬದಿಗಿಟ್ಟು ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ನೋಡಬೇಕು ಎಂದು ತೇಜಸ್ವಿನಿ ಸಲಹೆ ನೀಡಿದರು. ಬಿಜೆಪಿ ಮಹಿಳಾ ನಾಯಕರಾದ ರೂಪಾ ಡಿ. ಬಂಗೇರಾ, ಶಕಿಲಾ ಕಾವಾ, ಸುಲೋಚನಾ ಭಟ್, ಪ್ರಭಾಮಾಲಿನಿ ಮುಂತಾದವರು ಉಪಸ್ಥಿತರಿದ್ದರು.

