ಶಿವಮೊಗ್ಗ: ಕಳೆದ ಗುರುವಾರ ಪಿಎಫ್‍ಐ ಸಂಘಟನೆಯ ಏಕತಾ ರ್ಯಾಲಿಯ ಸಂದರ್ಭ ಉಂಟಾದ ಕೋಮು ಜ್ವಾಲೆಯ ಕಿಡಿ ಹಬ್ಬುತ್ತಾ ಸಾಗುತ್ತಿದ್ದು ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ವಿಶ್ವನಾಥ್(35) ಕೊಲೆಕೃತ್ಯ ಹಸಿರಾಗಿರುವಾಗಲೇ ಶುಕ್ರವಾರ ರಾತ್ರಿ ಹಂತಕರ ತಂಡವೊಂದು ತಾವರೆ ಚಟ್ನಹಳ್ಳಿ ಎಂಬಲ್ಲಿ ಪಶುವೈದ್ಯಾಧಿಕಾರಿಯ ಮೇಲೆ ಅಟಕಾಯಿಸಿ ದಾಳಿ ನಡೆಸಿದೆ. ಮತ್ತೊಬ್ಬರನ್ನು ಚಾಕುವಿನಿಂದ ಇರಿದು ಕೊಲೆಗೈಯ್ಯಲಾಗಿದೆ. ಕೊಲೆಯತ್ನಕ್ಕೀಡಾದ ಪಶುವೈದ್ಯರನ್ನು ಜಯಂತ್(40) ಎಂದು ಗುರುತಿಸಲಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅದೇ ರೀತಿ ಕೊಲಗೀಡಾದ ದುರ್ದೈವಿ ಯುವಕನನ್ನು ಮಂಜುನಾಥ್ (32) ಎಂದು ಗುರುತಿಸಲಾಗಿದೆ. ಇವರ ಶವ ಶಿವಮೊಗ್ಗಾದ ಪದ್ಮಾ ಟಾಕೀಸಿನ ಹಿಂಭಾಗದಲ್ಲಿ ಪತ್ತೆಯಾಗಿದೆ. ತಲೆಯ ಹಿಂಭಾಗದಲ್ಲಿ ರಾಡಿನಿಂದ ಬಡಿದ ಗುರುತುಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಯಂತ್ ಅವರು ಎಂದಿನಂತೆ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಮೊನ್ನೆ ನಡೆದ ಘಟನೆಗೂಶುಕ್ರವಾರ ತಡರಾತ್ರಿ ನಡೆದ ಘಟನೆಗೂ ಪರಸ್ಪರ ಸಂಬಂಧವಿದೆಯಾ ಎಂದು ಪರಿಶೀಲಿಸಲಾಗುತ್ತಿದೆ.
ಗುರುವಾಋ ಸಂಜೆ ಪಾಪ್ಯುಲರ್ ಫ್ರಂಟ್ ಇಂಡಿಯಾ ಏಕತಾ ರ್ಯಾಲಿ ನಡೆಸುತ್ತಿದ್ದಾಗ ಆರೆಸ್ಸೆಸ್ ವಿರುದ್ಧ ಘೋಷಣೆ ಕೂಗಿತ್ತು. ಇದಾದ ನಂತರ ರ್ಯಾಲಿಗೆ ಕಲ್ಲು ಎಸೆಯಲಾಗಿತ್ತಲ್ಲದೆ, ಆನಂತರ ನಡೆದ ಗಲಾಟೆಯಲ್ಲಿ ಒಬ್ಬನ ಕೊಲೆಯೂ ನಡೆದಿತ್ತು. ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಶಿವಮೊಗ್ಗ ಬಂದ್‍ಗೆ ಕರೆ ನೀಡಿದ್ದು, ಬಂದ್ ನಡೆಯುತ್ತಿದೆ.
