ಬಂಟ್ವಾಳ: ಕರಿಯಂಗಳ ಹಾಗೂ ಬಡಗಬೆಳ್ಳೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಲ್ಲಿಪ್ಪಾಡಿ ಎಂಬಲ್ಲಿ ಜನಪ್ರತಿನಿಧಿಗಳಿಂದ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿರುವ ಈ ಶಾಪಗ್ರಸ್ತ ರಸ್ತೆಯೊಂದಿದೆ. ರಸ್ತೆ ನಿರ್ಮಾಣಗೊಂಡು ಬರೋಬ್ಬರಿ 35 ವರ್ಷಗಳೇ ಕಳೆದಿದೆ. ಸುಮಾರು 350ಕ್ಕಿಂತಲೂ ಅಧಿಕ ಕುಟುಂಬಗಳು ಈ ರಸ್ತೆಯನ್ನು ನಿತ್ಯದ ಸಂಪರ್ಕಕ್ಕಾಗಿ ಅವಲಂಬಿಸಿಕೊಂಡಿದೆ. ಆದರೆ ಈವರೆಗೂ ಡಾಮರಿನ ಲೇಪ ಕಂಡಿಲ್ಲ. ಪಲ್ಲಿಪ್ಪಾಡಿಯಿಂದ ಸಾಣೂರು, ಬಡಗಬೆಳ್ಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪ್ರಯಾಣಿಸುವುದೆಂದರೆ ಹರಸಾಹಸ ಪಡಬೇಕು. ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ಪುಂಚಮೆಯಿಂದ ಎರಡೂವರೆ ಕಿ.ಮೀ.ದೂರದಲ್ಲಿದೆ ಪಲ್ಲಿಪಾಡಿ. ಅಲ್ಲಿಂದ ಬಡಗಬೆಳ್ಳೂರು ರಸ್ತೆಯ ಮೂಲಕ ತಾಲೂಕು ಕೇಂದ್ರಕ್ಕೆ ತಲುಪಲು ಇರುವುದು 7 ಕಿ.ಮೀ. ದೂರ. ಆದರೆ ರಸ್ತೆ ದುರಾವಸ್ಥೆಯಿಂದ ಪುಂಚಮೆ ಮೂಲಕ ಸುಮಾರು 13 ಕಿ.ಮೀ. ದೂರ ಸುತ್ತು ಬಳಸಿ ಪ್ರಯಾಣಿಸುವ ಅನಿವಾರ್ಯತೆ ಈ ಗ್ರಾಮಸ್ಥರದ್ದು.
2

1
ಇದು ಜಿ.ಪಂ. ರಸ್ತೆಯಾಗಿದ್ದರೂ ಯಾವೊಬ್ಬ ಜನಪ್ರತಿನಿಧಿಯು ಇದರ ಬಗ್ಗೆ ಗಮನ ಹರಿಸದೆ ನಿರ್ಲಕ್ಷಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಚುನಾವಣೆಯ ಸಂದರ್ಭ ಮಾತ್ರ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆ ಅಭಿವೃದ್ದಿ ಪಡಿಸುವ ಭರವಸೆ ನೀಡುವ ಜನಪ್ರತಿನಿಧಿಗಳು ಬಳಿಕ ಕಾಣಸಿಗುವುದು ಮುಂದಿನ ಚುನಾವಣೆಗೆ ಮಾತ್ರ ಎನ್ನುವ ಆರೋಪವನ್ನು ಇಲ್ಲಿನ ಜನರು ಮಾಡುತ್ತಾರೆ. ನಿತ್ಯ ನೂರಾರು ಶಾಲಾ ಮಕ್ಕಳು, ಉದ್ಯೋಗಕ್ಕೆ ತೆರಳುವವರು ಈ ರಸ್ತೆಯನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಇನ್ನೂ ಮೂಲಸ್ಥಿತಿಯಲ್ಲಿಯೇ ಇರುವುದರಿಂದ ಇತರ ಎಲ್ಲಾ ಅಭಿವೃದ್ದಿ ಕಾರ್ಯಗಳಿಗೂ ತೊಡಕುಂಟಾಗಿದೆ.
ರಸ್ತೆಯನ್ನು ಅಭಿವೃದ್ದಿ ಪಡಿಸಿಕೊಡುವಂತೆ ಗ್ರಾಮಪಂಚಾಯತ್ ಸಹಿತ ಜವಬ್ದಾರಿಯುತ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಯಾರು ಇತ್ತ ಗಮನ ಹರಿಸಿಲ್ಲ. ಭರವಸೆಗಳಿಗೆ ಮಾತ್ರ ತಮ್ಮ ಅಭಿವೃದ್ದಿಯನ್ನು ಸೀಮಿತಗೊಳಿಸಿರುವ ಜನಪ್ರತಿನಿಧಿಗಳ ವಿರುದ್ದ ರೋಸಿ ಹೋದ ಗ್ರಾಮಸ್ಥರು ಮತ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದರು.

By suddi9

Leave a Reply

Your email address will not be published. Required fields are marked *