ಕಾಸರಗೊಡು: ನಾಲ್ಕು ಕಿಲೋ ಗಾಂಜಾ ಸಹಿತ ಇಬ್ಬರನ್ನು ಡಿವೈಎಸ್ಪಿ ಟಿ.ಪಿ. ರಂಜಿತ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಉಪ್ಪಳ ಬಳಿಯ ಪತ್ವಾಡಿ ನಿವಾಸಿ ಇರ್ಶಾದ್ (23) ಹಾಗೂ ಪಚ್ಲಂಪಾರೆ ನಿವಾಸಿ ಅಬ್ದುಲ್ಲ (53) ಎಂಬವರನ್ನು ಈ ಸಂಬಂಧ ಬಂಧಿಸಲಾಗಿದೆ.

ಗಾಂಜಾ ಸಾಗಾಟಕ್ಕೆ ಬಳಸಿದ ಬೈಕ್ ಗಳನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಉಪ್ಪಳ ಪೇಟೆಯ ಹೆನಫಿ ಬಜಾರ್ನಿಂದ ಇವರನ್ನು ಬಂಧಿಸಲಾಗಿದೆ.
ಕರ್ನಾಟಕದ ಮಂಗಳೂರು, ಉಡುಪಿ, ಮಣಿಪಾಲ ಸಹಿತ ಇತರೆಡೆಗಳಿಗೆ ಇವರು ಗಾಂಜಾ ಮಾರಾಟ ಮಾಡುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಗಾಂಜಾ ಮಾರಾಟ ತಂಡವು ತಲಪುವ ಕುರಿತು ಪೊಲೀಸರಿಗೆ ದೊರಕಿದ ರಹಸ್ಯ ಮಾಹಿತಿಯ ಮೇರೆಗೆ ಪೊಲೀಸರು ಹೊಂಚು ಹಾಕಿ ಕುಳಿತು ಬೈಕ್ ಗಳಲ್ಲಿ ಬಂದು ಗಾಂಜಾ ಹಸ್ತಾಂತರಿಸುತ್ತಿದ್ದ ವೇಳೆ ಬಂಧಿಸಿದರು.
ಉಪ್ಪಳ ಕೇಂದ್ರೀಕರಿಸಿ ವ್ಯಾಪಕ ಪ್ರಮಾಣದ ಗಾಂಜಾ ವ್ಯಾಪಾರ ಜಾಲ ಭದ್ರವಾಗಿ ನೆಲೆಯೂರಿದ್ದು, ಈ ಪ್ರದೇಶದ ಯುವ ಜನಾಂಗ ಮಾರಾಟ ಮತ್ತು ಬಳಕೆಯಲ್ಲಿ ವ್ಯಸ್ಥವಾಗಿದೆ. ಆಂಧ್ರ ಪ್ರದೇಶದಿಂದ ಗಾಂಜಾವನ್ನು ತಂದು ಇಲ್ಲಿ ಮರಾಟ ಮಾಡಲಾಗುತ್ತಿದೆ. ಕಳೆದ ಹಲವು ಸಮಯಗಳಿಂದ ಈ ಪ್ರದೇಶದ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಿಸುತ್ತಿದ್ದರೂ, ಮಾರಾಟ ಜಾಲದ ಪ್ರಧಾನ ಸೂತ್ರಧಾರನ ಎಳೆಯನ್ನು ಗುರುತಿಸುವಲ್ಲಿ ಪೊಲಿಸರು ವಿಫಲರಾಗಿದ್ದಾರೆ.
ಹಫ್ತಾ ವಸೂಲಿ: ಇತ್ತೀಚೆಗೆ ಉಪ್ಪಳ ಪ್ರದೇಶದ ಹಲವೆಡೆಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಬದಿ ಅಲ್ಲಲ್ಲಿ ರಾತ್ರಿ ಹೊತ್ತು ಸಂಚರಿಸುವ ವಾಹನಗಳನ್ನು ತಡೆದು ನಿಲ್ಲಿಸಿ ಹಫ್ತಾ ವಸೂಲಿ ಮಾಡುವ ತಂಡಗಳು ಸಕ್ರೀಯಗೊಂಡಿದ್ದು, ದುಬಾರಿ ಬೆಲೆಯ ಗಾಂಜಾದ ದಾಸರಾದ ಯುವ ಸಮೂಹ ಇಂತಹ ಕೃತ್ಯಗಳ ಹಿಂದಿವೆಯೆಂದು ಸಂಶಯಿಸಲಾಗಿದೆ.
ವಾಹನಗಳನ್ನು ತಡೆದು ನಿಲ್ಲಿಸಿ ಜೇಬಲ್ಲಿರುವ ಹಣವನ್ನು ವಸೂಲಿಗೈಯುವ ತಂಡಗಳ ಬಗ್ಗೆ ಪೊಲೀಸರು ನಿಗಾ ಇರಿಸಿದ್ದು, ಶೀಘ್ರ ಇವುಗಳನ್ನು ಮಟ್ಟ ಹಾಕಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.
