ಶಿವಮೊಗ್ಗ : ಶಿವಮೊಗ್ಗಾದಲ್ಲಿ ಕಿಡಿಗೇಡಿಗಳ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇಂದು ಮತ್ತೆ ಹಿಂಸೆ ಭುಗಿಲೆದ್ದಿದ್ವು ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದರೂ ಅಲ್ಲಲ್ಲಿ ಕಿಡಗೇಡಿಗಳು ಬೈಕ್ ಸೇರಿದಂತೆ ವಾಹನಗಳಿಗೆ ಕಲ್ಲು ತೂರುವುದು, ಬೆಂಕಿ ಹಚ್ಚುವುದನ್ನು ಮುಂದುವರಿಸಿದರು.
ನಗರದಾದ್ಯಂತ ಸೆಕ್ಷನ್ 144 ಜಾರಿಗೊಳಿಸಿದ್ದರೂ ಗಾಂಧಿ ಬಜಾರ್, ಓಟಿ ರಸ್ತೆ, ಬಿ.ಹೆಚ್.ರಸ್ತೆ, ನೆಹರೂ ರಸ್ತೆ ಸೇರಿದಂತೆ ಹಳೇ ಶಿವಮೊಗ್ಗ ಭಾಗದಲ್ಲಿ ಕರ್ಫ್ಯೂ ವಿಧಿಸಿದ ವಾತಾವರಣ ಏರ್ಪಟ್ಟಿದೆ. ಗಾಂಧಿ ಬಜಾರ್‌ನ ಇಕ್ಕೆಲಗಳಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ.
ಜನರು ಗುಂಪು ಗುಂಪಾಗಿ ಸೇರಿದೆಡೆಗಳಲ್ಲಿ ಪೊಲೀಸರು ಅವರನ್ನು ಚದುರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ಕೆಲವೆಡೆ ಇಂದು ಬೆಳಿಗ್ಗೆಯೂ ಆಟೋ – ಬೈಕ್‌ಗಳಿಗೆ ಕಲ್ಲು ತೂರಿ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ.
ಇದರಿಂದಾಗಿ ಕೆಲವೆಡೆ ಪೊಲೀಸರೆ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶಾಲಾ ಕಾಲೇಜುಗಳಿಗೂ ರಜೆ ನೀಡಿದ್ದರಿಂದಾಗಿ ಜನಸಂಚಾರ ಕಡಿಮೆ ಇತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್, ಅಂಚೆ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದರೂ ಸಾರ್ವಜನಿಕರು ಮಾತ್ರ ಕಾಣಿಸುತ್ತಿರಲಿಲ್ಲ.
ಇನ್ನು ಬಸ್ ನಿಲ್ದಾಣಗಳಲ್ಲೂ ಜನದಟ್ಟಣೆ ಕಡಿಮೆ ಇತ್ತು. ಕೆಲ ಮಾರ್ಗಗಳ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಹೊರಗಿನಿಂದ ಬರುವ ಜನಸಂಖ್ಯೆಯೂ ಕಡಿಮೆಯಿತ್ತು. ಈ ಮಧ್ಯೆ ನಗರದಲ್ಲಿ ನಿನ್ನೆಯಿಂದ ಇಂದು ಸಂಜೆವರೆಗೆ ಜಾರಿಗೊಳಿಸಿದ್ದ ನಿಷೇಧಾಜ್ಞೆ (ಸೆಕ್ಷನ್ ೧೪೪)ಯನ್ನು ಫೆ.೨೫ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ೨೦ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ಶಿವಮೊಗ್ಗದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆಯುತ್ತಿದ್ದರೂ ಪೊಲೀಸರು ತಹಬದಿಗೆ ತರುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜನರು ಗುಂಪು ಸೇರದಂತೆ, ಜನಜಂಗುಳಿಯಾಗುವಂತಹ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ನೋಡಿಕೊಳ್ಳಲಾಗುತ್ತಿದೆ. ನಗರದ ಎಲ್ಲಾ ಚಿತ್ರಮಂದಿರಗಳಲ್ಲೂ ಪ್ರದರ್ಶನ ರದ್ದುಗೊಳಿಸಲಾಗಿದೆ.
ನಿನ್ನೆ ಸಂಜೆ ಗಾಜನೂರಿನಲ್ಲಿ ದುಷ್ಕರ್ಮಿಗಳ ಹಲ್ಲೆಗೊಳಗಾಗಿ ಮೃತಪಟ್ಟ ವಿಶ್ವನಾಥ್ (೩೨)ನ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪೂರ್ವವಲಯ ಐಜಿಪಿ ಎಂ. ನಂಜುಂಡಸ್ವಾಮಿ ಮತ್ತಿತರ ಅಧಿಕಾರಿಗಳು ಕುಟುಂಬ ಸದಸ್ಯರ ಮತ್ತು ಸಾರ್ವಜನಿಕರು ಆಕ್ರೋಶಕ್ಕೆ ಗುರಿಯಾಗಬೇಕಾಯಿತು.

