ಬಂಟ್ವಾಳ:ಪ್ರಸಕ್ತ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಅವರಲ್ಲಿ ಅಡಗಿರುವ ವಿಶೇಷ ಪ್ರತಿಭೆಗಳನ್ನು ಅನಾವರಣಗೊಳಿಸುವ ಅವಕಾಶವೂ ಇರಬೇಕು. ಆ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಹಂತದಲ್ಲಿಯೂ ವಿಪುಲ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಿದೆ ಎಂದು ಮಂಗಳೂರು ಮನ್ದೇವ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದ್ದಾರೆ.

ಸಿದ್ಟ್ಟೆದಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ‘ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಮಿಫ್ಟ್ ಕಾಲೇಜು ವಾರ್ಷಿಕೋತ್ಸವ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಯಾವುದೇ ರೀತಿಯ ನೆರವು ಪಡೆಯದೆ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಸುಮಾರು 600ಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳಿಗೆ ಉಚಿತ ‘ಅಕ್ಷರ ದಾಸೋಹ’ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣದ ಜೊತೆಗೆ ಸಂಸ್ಕೃತ ಮತ್ತು ಅರೇಬಿಕ್ ಭಾಷೆ ಪರಿಚಯಿಸಲಾಗುತ್ತದೆ ಎಂದರು.
ಮಂಗಳೂರು ಮಿಫ್ಟ್ ಕಾಲೇಜಿನ ಸಂಸ್ಥಾಪಕ ಎಂ.ಜಿ.ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿ ರಾಷ್ಟ್ರಭಕ್ತಿ ಸಹಿತ ಸುಸಂಸ್ಕೃತ ಶಿಕ್ಷಣದೊಂದಿಗೆ ಪ್ರತಿಭಾನ್ವಿತ ವ್ಯಕ್ತಿಯಾಗಿ ರೂಪುಗೊಳಿಸಲು ಶಿಕ್ಷಕರ ಜೊತೆಗೆ ಪೋಷಕರಿಗೂ ಹೆಚ್ಚಿನ ಜವಾಬ್ದಾರಿ ಇದೆ ಎಂದರು.
ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸ್ಥಳೀಯ ಕುಕ್ಕಿಪಾಡಿ ಗ್ರಾ.ಪಂ.ಉಪಾಧ್ಯಕ್ಷೆ ಬೇಬಿ, ಸದಸ್ಯ ಸುರೇಶ ಅಂಚನ್, ಉದ್ಯಮಿ ನವೀನ ಮೆಂಡನ್ ಮತ್ತಿತರರು ಶುಭ ಹಾರೈಸಿದರು. ಟ್ರಸ್ಟಿ ರಾಧಾಕೃಷ್ಣ ಶೆಟ್ಟಿ, ಪ್ರಮುಖರಾದ ವಿಜಯ ಕುಮಾರ್ ಚೌಟ, ರಮೇಶ ಕೆ., ಬಿ.ಗಣೇಶ ಶೆಟ್ಟಿ ಬಿಜೈ, ಭವ್ಯಾ, ಕಾಲೇಜಿನ ಪ್ರಾಂಶುಪಾಲೆ ಚಂದ್ರಲೇಖ ಗೌಡ ಮತ್ತಿತರರು ಇದ್ದರು.
