ಬಂಟ್ವಾಳ : ಮಂಗಳೂರಿನ ನೆಪ್ರೋ ಯುರೋಲಜಿ ಚಾರಿಟೇಬಲ್ ಟ್ರಸ್ಟ್ ಜಿಲ್ಲೆಯ ವಿವಿಧ ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ಜ 13 ರಿಂದ ಮಾ 12 ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಕಿಡ್ನಿ ಆರೋಗ್ಯ ಅಭಿಯಾನದ ಅಂಗವಾಗಿ ಫೆ 16 ರಂದು ಬಿ.ಸಿ.ರೋಡಿನಲ್ಲಿ ಕಿಡ್ನಿ ಆರೋಗ್ಯ ಜನಜಾಗೃತಿ ಜಾಥಾ ನಡೆಯಲಿದೆ ಎಂದು ಕಿಡ್ನಿ ಆರೋಗ್ಯ ಅಭಿಯಾನ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಬಿ.ಸಿ.ರೋಡಿನಲ್ಲಿ ಸುದ್ದಿಗಾರರಿಗೆ ಈ ಬಗ್ಗೆ ವಿವರಿಸಿದ ಅವರು ಬೆಳಿಗ್ಗೆ 10 ಗಂಟೆಗೆ ಕೈಕಂಬ ಪೊಳಲಿ ದ್ವಾರದಿಂದ ಬಿ.ಸಿ.ರೋಡು ತಾಲೂಕು ಕಛೇರಿ ವರೆಗೆ ನಡೆಯುವ ಜಾಥಾವನ್ನು ರೋಟರಿ ಜಿಲ್ಲಾ ಗವರ್ನರ್ ಡಾ. ಭಾಸ್ಕರ್ ಎಸ್. ಜಾಥಾ ಉದ್ಘಾಟಿಸುವರು. ಕಿಡ್ನಿ ಅಭಿಯಾನ ಸಂಘಟನಾ ಸಮಿತಿ ಅಧ್ಯಕ್ಷ ಎಸ್. ಗಣೇಶ್ ರಾವ್ ಪ್ರತಿಜ್ಞಾ ವಿಧಿ ಬೋಧಿಸುವರು. ತಾಲೂಕಿನ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ತಾಲೂಕು ಆರೋಗ್ಯಾಧಿಕಾರಿ ಸಹಿತ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಿಡ್ನಿ ವೈಫಲ್ಯವು ಜನ ಸಮುದಾಯವನ್ನು ಕಾಡುತ್ತಿರುವ ಮಾರಣಾಂತಿಕ ಕಾಯಿಲೆಯಾಗಿದ್ದು, ಈ ಹಿನ್ನಲೆಯಲ್ಲಿ ಕಿಡ್ನಿ ಸಂಬಂಧಿ ರೋಗಗಳ ಅರಿವು ಮತ್ತು ರೋಗ ಬಾರದಂತೆ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಿಡ್ನಿ ಆರೋಗ್ಯ ಅಭಿಯಾನ ನಡೆಯಲಿದೆ ಎಂದು ಉಮರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಹಿದಾಯ ಫೌಂಡೇಶನ್ ಪೂರ್ವಾಧ್ಯಕ್ಷ ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು, ಬಂಟ್ವಾಳ ರೋಟರಿ ಕ್ಲಬ್ ಕಾರ್ಯದರ್ಶಿ ಸಂಜೀವ ಪೂಜಾರಿ, ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಅಬೂಬಕ್ಕರ್ ವಿಟ್ಲ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪ್ರೇಮ್‍ನಾಥ್ ಕೆ., ವಿ ಕನೆಕ್ಟ್ ಗ್ರೂಪ್ ಎಡ್ಮಿನ್ ಆಶಿಕ್ ಕುಕ್ಕಾಜೆ, ರಶೀದ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *