ಭತ್ತದ ಪೈರು,ತೆಂಗು-ಅಡಿಕೆ-ಬಾಳೆ ತೋಟಗಳ ಹಸಿರು ಸಿರಿಯ ಪಾತೂರು ಗ್ರಾಮವು ಗಡಿನಾಡು ಕಾಸರಗೋಡು ಜಿಲ್ಲೆಯ ದಕ್ಷಿಣದ ತುದಿಯಲ್ಲಿದೆ. ಈ ಗ್ರಾಮದ ಪೂರ್ವದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸಾಲೆತ್ತೂರು ಹಾಗೂ ಉತ್ತರದಲ್ಲಿ ಬಾಳೆಪುಣಿ ಗ್ರಾಮವಿದ್ದು ಕೇರಳ-ಕರ್ನಾ ಟಕ ರಾಜ್ಯಗಳ ಸಂಗಮವನ್ನು ನಾವಿಲ್ಲಿ ಕಾಣಬಹುದು
ಗ್ರಾಮದ ಕೇಂದ್ರಸ್ಥಾನ ಬಾಕ್ರಬೈಲಿನಿಂದ ಪಶ್ಚಿಮಾಭಿಮುಖವಾಗಿ ನೋಡಿದಾಗ ಹಸಿರುಬೆಟ್ಟಗಳ ನಡುವೆ ಕಂಗೊಳಿಸುವ ಶ್ರೀ ಸೂರ್ಯೇ ಶ್ವರ ದೇವಸ್ಥಾನವಿದೆ. ಈ ದೇವಸ್ಥಾನವು ಹತ್ತೂರಿಗೆ ಪ್ರಧಾನ ದೇವಸ್ಥಾನವಾಗಿದ್ದು ನೈಋತ್ಯಭಾಗದಲ್ಲಿ ಶ್ರೀ ಬಜಿಲಾಡಿ ಮಹಿಷಮರ್ಧಿನಿ ಹಾಗೂ ಈಶಾನ್ಯದಲ್ಲಿ ಶ್ರೀ ಬೊಳಿಂಜ ವಿಷ್ಣುಮೂರ್ತಿ ದೇವಸ್ಥಾನವನ್ನೂ ಹೊಂದಿ ಒಂದೇ ಗ್ರಾಮದಲ್ಲಿ ಮೂರು ದೇವಾಲಯಗಳಲ್ಲಿ ಉಪಾಸನೆ ನಡೆಯುತ್ತಿರುವುದು ಈ ಗ್ರಾಮದ ವೈಶಿಷ್ಟ್ಯವಾಗಿದೆ.

ಕ್ಷೇತ್ರದ ಐತಿಹ್ಯ
ಶ್ರೀ ಸೂಯೇಶ್ವರ ದೇವಸ್ಥಾನವಿರುವ ಪ್ರದೇಶವು ಪ್ರಾಚೀನ ಕಾಲದಲ್ಲಿ ಋಷಿಗಳ ತಪೋಭೂಮಿ. ಭಗವಾನ್ ಸೂರ್ಯನನ್ನು ಋಷಿಗಳು ಯಾಗ,ಯಜ್ಞ,ತಪಸ್ಸಿನ ಮೂಲಕ ಪ್ರಸನ್ನಗೊಳಿಸುತ್ತಾರೆ. ಸುಪ್ರಸನ್ನಗೊಂಡ ಸೂರ್ಯದೇವನನು ಅನುಗ್ರಹ ರೂಪದಲ್ಲಿ ತನ್ನ ತೇಜಪುಂಜವನ್ನು ಧರೆಗಿಳಿಸುತ್ತಾನೆ. ಸೂರ್ಯತೇಜಸ್ಸಿನ ಪ್ರಭಾವವನ್ನು ಪ್ಕೃಥಿಯಾಗಲೀ ಜೀವರಾಶಿಗಳಾಗಲೀ ಸಹಿಸಲಸಾಧ್ಯವೆಂಬ ಸತ್ಯವನ್ನು ಮನಗಂಡ ಋಷಿಗಳು ಉಷ್ಣಂ ಉಷ್ಣೇನ ಸಾಮ್ಯತೇ: ಎಂಬ ತತ್ವದಿಂದ ಆದಿತ್ಯನ ಅಧಿದೇವತೆಯಾದ ಅವನಿಂದಲೂ ಪ್ರಖರವಾದ ಶಿವನನ್ನು ಉಪಾಸನೆ ಮಾಡಿ ಪ್ರಸನ್ನಗೊಳಿಸಿ ಸೂರ್ಯನನ್ನು ಶಾಂತಗೊಳಿಸುವಂತೆ ಪ್ರಾರ್ಥಿಸುತ್ತಾರೆ. ಸೂರ್ಯಶವನ್ನು ಶಾಂತಗೊಳಿಸಿದ ಶಿವನೂ ಇಲ್ಲಿ ಸಾನ್ನಿಧ್ಯ ಹೊಂದಿರುವುದರಿಂದ ಸೂರ್ಯೇಶ್ವರ ಎಂಬ ಹೆಸರಿನಲ್ಲಿ ಋಷಿಗಳು ಲಿಂಗ ಪ್ರತಿಷ್ಠೆ ಮಾಡಿದ್ದು ಭಕ್ತರಿಂದ ಆರಾಧನೆಗೊಳ್ಳುತ್ತಿದೆ.
ಸೂರ್ಯ,ಈಶ್ವರ ಮತ್ತು ದುರ್ಗಾಶಕ್ತಿ ಸೇರಿರುವುದರಿಂದ ಇಲ್ಲಿನ ಲಿಂಗವು ತ್ರಿಶಕ್ತ್ಯಾತ್ಮಕವಾಗಿದೆ. ಸುಮಾರು ಎಪ್ಪತೈದು ವರ್ಷಗಳ ಹಿಂದಿನವರೆಗೂ ಇಲ್ಲಿ ಉತ್ಸವಗಳು ನಡೆಯುತ್ತಿತ್ತು. ಸಮೀಪದ ಕಣಂತೂರು, ಮಲಾರು ಹಾಗೂ ಕೊಡ್ಲಮೊಗರು ದೈವಸಾನ್ನಿಧ್ಯಗಳು ಶ್ರೀ ದೇವರೊಂದಿಗೆ ಅಭೇದ್ಯ ಸಂಬಂಧವನ್ನು ಹೊಂದಿದ್ದು ಉತ್ಸವಕಾಲದಲ್ಲಿ ದೇವರೊಂದಿಗೆ ಭೂತಬಲಿ ಉತ್ಸವ ನಡೆದ ಐತಿಹ್ಯವಿದೆ. ಹಿಂದೆ ಈ ದೇವಸ್ಥಾನದ ವ್ಯಾಪ್ತಿ ಸುಮಾರಾಗಿ ವಿಟ್ಲ,ಕುಂಬ್ಲೆ ಹಾಗೂ ಉಳ್ಳಾಲ ಸೀಮೆಗಳಿಗೆ ವ್ಯಾಪಿಸಿದ್ದು ಹತ್ತೂರುಗಳಿಗೆ ಈ ದೇವಸ್ಥಾನ ಪ್ರಧಾನವಾಗಿತ್ತು ಎಂಬುದು ಹಿರಿಯರು ನೆನಪಿಸುತ್ತಾರೆ. ದೇವಾಲಯದಿಂದ ಸುಮಾರು ಎರಡು ಕಿ.ಮೀ.ದೂರದ ಆಗ್ನೇಯಭಾಗದ ಬಲ್ಲಂದಪದವು ಎಂಬಲ್ಲಿ ಶಿಲಾ ನಿಕ್ಷೇಪಗಳ ಮಧ್ಯದಲ್ಲಿ ವರ್ಷಪೂತರ್ಿ ಇರುವ ನೀರಿನ ಹರಿಯುವಿಕೆಯು ಶಿವನ ಜತೆಯಲ್ಲಿರುವ ಗಂಗಾ ಸಾನ್ನಿಧ್ಯವಾಗಿದೆ. ಶ್ರೀದೇವರ ಮೂಲಸ್ಥಾನ ಗುರುಸ್ಥಾನವಾಗಿದ್ದು ತೀರ್ಥ ಪ್ರಸಾದಗಳು ರೋಗ ನಿವಾರಣೆಯ ಶಕ್ತಿಹೊಂದಿದೆ.ಆಸೇತು ಹಿಮಾಚಲ ವರೆಗಿನ ಭರತಖಂಡದಲ್ಲಿ ಅನೇಕ ದೇವತಾ ಸಾನ್ನಿಧ್ಯಗಳಿದ್ದರೂ ಸೂರ್ಯೇಶ್ವರ ಎಂಬ ದೇವರ ಪ್ರತಿಷ್ಠೆ ಎಲ್ಲೂ ಕಂಡುಬರುವುದಿಲ್ಲವೆಂಬುದು ಕ್ಷೇತ್ರಪರ್ಯಟನೆ ಮಾಡಿದ ಬಲ್ಲವರ ಮಾತು. ಸಾಮಾನ್ಯವಾಗಿ ಶಶಿಶೇಖರ,ಚಂದ್ರಮೌಳೀಶ್ವರ ಇತ್ಯಾದಿಯಾಗಿ ಚಂದ್ರನೊಂದಿಗೆ ಸಂಬಂಧ ಕಾಣುವ ಶಿವ ಇಲ್ಲಿ ಸೂರ್ಯನೊಂದಿಗಿರುವುದು ವಿಶಿಷ್ಟ.
ಸೂರ್ಯೇಶ್ವರ ದೇವಸ್ಥಾನದ ಉತ್ತರದಲ್ಲಿರುವ ಗಿರಿಯಲ್ಲಿ ನೀರಿನ ಉಗಮಸ್ಥಾನವಿದೆ. ಮಳೆಗಾಲದಲ್ಲಿ ಇಲ್ಲಿಂದ ಹರಿವ ನೀರು ಪೂರ್ವ ಹಾಗೂ ಪಶ್ಚಿಮಭಾಗದಲ್ಲಿ ಸಾಗಿ ಮಲಾರು ಮತ್ತು ಕೊಡ್ಲಮೊಗರು ದೈವಸಾನ್ನಿಧ್ಯವಿರುವ ಪ್ರದೇಶ ಸೇರುವುದು ಬೆರಗುಗೊಳಿಸುತ್ತದೆ.ದೇವಸ್ಥಾನದಲ್ಲಿ ಎರಡುಕಡೆ ಬಾವಿಗಳಿರುವುದು ಕೂಡಾ ವಿಶೇಷ.ಇದರ ಜಲಸೇವನೆಯಿಂದ ರೋಗ ರುಜಿನಗಳು ದೂರಾಗುವುದು ಎಂಬ ನಂಬಿಕೆಯಿದೆ.
ಕೇತ್ರದ ಪಶ್ಚಿಮದಲ್ಲಿ ನಾಗಸನ್ನಿಧಿಯಿದೆ. ಈಶಾನ್ಯ ಭಾಗದಲ್ಲಿ ಹಿಂದೆ ನಾಗೇಮಾರ್ ಎಂಬ ಸ್ಥಳದಲ್ಲಿದ್ದ ನಾಗಬ್ರಹ್ಮ ಸ್ಥಾನ,ಕೆರೆ ಹಾಗೂ ದೇವರ ಆಭರಣ-ಕಾಪಿಡುವ ಭಂಡಾರಗೃಹ ನಾಶಗೊಂಡಿರುವುದಾಗಿ ಪ್ರಶ್ನೆಯಲ್ಲಿ ತಿಳಿದುಬಂದ ವಿಚಾರವಾಗಿದೆ.ಇವೆಲ್ಲವೂ ದೇವಸ್ಥಾನದ ಗತವೈಭವವನ್ನು ಸಾರಿ ಹೇಳುತ್ತದೆ.
ಜೀರ್ಣೋದ್ಧಾರ
ಇದೀಗ ಸೂರ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದು ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ನ ಅಧೀನದಲ್ಲಿ ಜೀರ್ಣೋ ದ್ಧಾರ ಸಮಿತಿಯನ್ನು ರೂಪಿಸಲಾಗಿದೆ.ದೇವಸ್ಥಾನದ ಶಿಲಾಮಯ ಗರ್ಭಗೃಹ ಮತ್ತು ಸುತ್ತು ಪೌಳಿಯ ಕಾರ್ಯಾರಂಭದ ಸಲುವಾಗಿ ಫೆ.18 ರಿಂದ ಫೆ.22. 2015ರ ತನಕ ದೇವಸ್ಥಾನದಲ್ಲಿ ಅನುಜ್ಞಾಕಲಶ ಮತ್ತು ಬಾಲಾಲಯ ಪ್ರತಿಷ್ಠೆ ಕಲಶಾಭಿಷೇಕ ಕಾರ್ಯಕ್ರಮಗಳು ವೈದ್ಧಿಕ,ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

