ಉಳ್ಳಾಲ: ವೈದ್ಯಕೀಯ ಶಸ್ತ್ರ ಚಿಕಿತ್ಸಾ ಕಾರ್ಯಗಾರವು ಯುವ ವೈದ್ಯರಲ್ಲಿ ಆತ್ಮವಿಶ್ವಾಸ, ಕೌಶಲ್ಯ ಮತ್ತು ವೇಗವನ್ನು ಹೆಚ್ಚಿಸುವಲ್ಲಿ ಸಹಕಾರಿ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.
ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ನಾಸಾಕರ್ಣಕಂಠಶಾಸ್ತ್ರ ಮತ್ತು ಅಂಗರಚನಾಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರದಂದು ಕ್ಷೇಮ ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಜರಗಿದ ಅಲ್ಪಕಾಲಿಕ ಮೂಳೆ ಛೇದನ, ನಾಸಾಕರ್ಣಕಂಠಶಾಸ್ತ್ರ ಹಾಗೂ ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆ ಕುರಿತು ನಡೆದ ಒಂದು ದಿನದ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಮಹತ್ವ ಪೂರ್ಣ ಬದಲಾವಣೆಗಳಾಗಿವೆ ಈ ನಿಟ್ಟಿನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯವು ವಿಶೇಷವಾಗಿ ಫೆಲೋಶಿಪ್ ಕೋರ್ಸ್ಗಳನ್ನು ಪ್ರಾರಂಬಿಸಿದ್ದು, ಇಎನ್ಟಿ ಮತ್ತು ಕ್ಯಾನ್ಸರ್ ತಜ್ಞರು ಒಟ್ಟಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಭಾರತದಲ್ಲಿ 50ರಿಂದ 55 ಸಾವಿರ ಪದವಿ ಪಡೆದ ವೈದ್ಯರು ಮತ್ತು 23 ಸಾವಿರ ಸ್ವಾತಕೋತ್ತರ ಪದವಿ ಪಡೆದ ವೈದ್ಯರಿದ್ದು, ಪ್ರತೀ ವರ್ಷ 853ರಷ್ಟು ಮಾತ್ರ ಇಎನ್ಟಿ ವೈದ್ಯರು ಹೊರ ಬರುತ್ತಿದ್ದಾರೆ ಎಂದ ಯುವ ವೈದ್ಯರಿಗೆ ಶೈಕ್ಷಣಿಕ ಸಂದರ್ಭದಲ್ಲಿ ರೋಗಿಗಳನ್ನು ನೇರವಾಗಿ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆಯ ಕುರಿತು ಅನುಭವವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಆತ್ಮವಿಶ್ವಾಸ, ಕೌಶಲ್ಯ ವೃದ್ಧಿಗೆ ಕಾರ್ಯಗಾರಗಳು ಪೂರಕ ಎಂದರು.
ದೆಹಲಿಯ ಮೌಲಾನಾ ಆಝಾದ್ ವೈದ್ಯಕೀಯ ಕಾಲೇಜಿನ ಇಎನ್ಟಿ ವಿಭಾಗ ಮುಖ್ಯಸ್ಥ ಅಚಲ್ ಗುಲಾಟಿ ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಎಲ್ಲಾ ಸರ್ಜಿಕಲ್ ವಿಭಾಗಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಕಾರ್ಯಗಾರಗಳು ಇಂತಹ ವಿಚಾರಗಳ ಕುರಿತು ಶಿಕ್ಷಣ ನೀಡುತ್ತದೆ ಇದರ ಸದುಪಯೋಗವನ್ನು ವೈದ್ಯರು ಪಡೆದುಕೊಳ್ಳಬೇಕು ಎಂದರು.
ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಸರಕಾರಿ ವೈದ್ಯಕೀಯ ಕಾಲೇಜು ವಡೋದರಾ ಇದರ ಇಎನ್ಟಿ ವಿಭಾಗ ಮುಖ್ಯಸ್ಥ ಆರ್.ಜಿ.ಅಯ್ಯರ್, ಅನಾಟಮಿ ವಿಭಾಗ ಮುಖ್ಯಸ್ಥ ಡಾ. ಆನಂದ ಬಂಗೇರ, ಡಾ. ಮಾರ್ಟೂನ್ ಲೂಕಾಸ್, ಇ.ಎನ್.ಟಿ. ವಿಭಾಗ ಮುಖ್ಯಸ್ಥೆ ಡಾ. ರಾಜೇಶ್ವರಿ ಉಪಸ್ಥಿತರಿದ್ದರು.
ಡಾ. ಐರಿನ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಮರೀನಾ ಸಲ್ದಾನ ವಂದಿಸಿದರು.
ಕಾರ್ಯಗಾರದಲ್ಲಿ ಡಾ. ಅಜೀಮ್ ಕೊಲಾರ, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಡೀನ್ ಡಾ. ಖಾಝಾ ನಾಸಿರುದ್ಧೀನ್ಯೆನೆಪೊಯ ವೈದ್ಯಕೀಯ ಕಾಲೇಜಿನ ಡಾ. ಗಂಗಾಧರ ಸೋಮಯಾಜಿ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದರು.
