ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿ ದಡದಲ್ಲಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ 2.5ಕೋಟಿ ವೆಚ್ಚದಲ್ಲಿ ಸುತ್ತು ಪೌಳಿ ನಿರ್ಮಾಣಗೊಂಡು ಫೆ. 4ರಿಂದ 12ರತನಕ ಬ್ರಹ್ಮಕಲಶೋತ್ಸವ ಮತ್ತು ನೂತನ ಧ್ವಜಸ್ಥಂಭ ಪ್ರತಿಷ್ಠೆ ನಡೆಯಲಿದೆ ಎಂದು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬ್ರಹ್ಮಶ್ರೀ ಪೊಳಲಿ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ವಿವಿಧ ವೈಧಿಕ ವಿಧಿವಿಧಾನಗಳು ನಡೆಯಲಿದ್ದು ಫೆ.8ರಂದು ಧ್ವಜ ಪ್ರತಿಷ್ಠಾಪನೆ, ಧಾರ್ಮಿಕ ಸಭೆ ನಡೆಯಲಿದ್ದು, ಫೆ. 11ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಅನಂತಕೃಷ್ಣ, ಆಡಳಿತ ನಿರ್ದೇಶಕ ಜಯರಾಮ ಭಟ್, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬಿಲ್ಲವ ಮುಖಂಡ ಕೆ.ಸೇಸಪ್ಪ ಕೋಟ್ಯಾನ್, ಉದ್ಯಮಿ ಶಶಿಕಿರಣ್ ಶೆಟ್ಟಿ, ಪದ್ಮನಾಭ ಪಯ್ಯಡೆ, ವಿದ್ವಾಂಸ ರಘುಪತಿ ಭಟ್ ಸಸಿಹಿತ್ಲು, ಪುರಸಭಾಧ್ಯಕ್ಷೆ ವಸಂತಿ, ಸದಸ್ಯ ಎ.ಗೋವಿಂದ ಪ್ರಭು ಮತ್ತಿತರ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ವಸಂತ ರಾವ್ ಜೋಡುಮಾರ್ಗ, ಮೀನಾಕ್ಷಿ.ವಿ.ರಾವ್ ಜೋಡುಮಾರ್ಗ, ಜಗದೀಶ್ ಹೊಳ್ಳ, ಕಂದೂರು ಪರಮೇಶ್ವರ ಐತಾಳ್, ಬಿ.ರಾಮಚಂದ್ರ ರಾವ್ ಬಿ.ಸಿ.ರೋಡು ಮತ್ತಿತರರು ಇದ್ದರು
