ಸಾಧಕರಿಗೆ ಸನ್ಮಾನ
ಸುದ್ದಿ9 ಮೂಡುಬಿದರೆ: ಸಮಾಜವನ್ನು ಪರಿವರ್ತಿಸುವ ಹಾಗೂ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿ ಇರುವುದು ಯುವಕರಿಗೆ ಮಾತ್ರ. ಯುವಕರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸತ್ಪ್ರಜೆಗಳಾಗಿ ಬೆಳೆಸುವ ಹೊಣೆಗಾರಿಕೆ ಹೆತ್ತವರ ಮೇಲಿದೆ ಎಂದು ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್ ಹೇಳಿದರು.
ನಡ್ಯೋಡಿ ಯುವಕ ಮಂಡಲ ಮಾರ್ಪಾಡಿ ಕಲ್ಲಬೆಟ್ಟು ಶನಿವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದ ಮುಖ್ಯ ಅತಿಥಿ ಪುರಸಭೆ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಮಾತನಾಡಿ ಮಕ್ಕಳು ಕೇವಲ ವಿದ್ಯಾವಂತರಾದರೆ ಸಾಲದು ಅವರಿಗೆ ಗುರುಹಿರಿಯರನ್ನು ಗೌರವಿಸುವ, ಹೆತ್ತವರನ್ನು ಪ್ರೀತಿಸುವ ಹಾಗೂ ಸಮಾಜಕ್ಕೆ ಆದರ್ಶವಾಗಬಲ್ಲ ಶಿಕ್ಷಣ ಸಿಗಬೇಕು ಎಂದರು.
ಸನ್ಮಾನ: ನಾಟಿ ವೈದ್ಯ ಶ್ಯಾಮರಾಯ ಆಚಾರ್ಯ, ಸಮಾಜ ಸೇವಕ ಇಬ್ರಾಹಿಂ ಯಾನೆ ಮಯ್ಯದಿ ಅವರನ್ನು ಸನ್ಮಾಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಡ್ಯೋಡಿ ಮಹಿಳಾ ಮಂಡಲ ಮತ್ತು ಯುವಕ ಮಂಡಲಕ್ಕೆ ಸೇರ್ಪಡೆಗೊಂಡ ನೂತನ ಸದಸ್ಯರ ವಿವರಗಳನ್ನು ಉಪಾಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ನೀಡಿದರು. ಪುರಸಭೆ ಸದಸ್ಯ ರಾಜೇಶ್ ಕೋಟೆಗಾರ್, ಉದ್ಯಮಿ ಐತಪ್ಪ ಆಳ್ವ, ಗಿರಿ ಕನಸ್ಟ್ರಕ್ಷನ್ನ ಗಿರೀಶ್ ಕುಮಾರ್, ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಎಂ. ವಸಂತ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಹೇಮಾವತಿ ಆರ್. ಪೂಜಾರಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಎಂ. ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ನಿರೂಪಿಸಿದರು. ವಿಶ್ವನಾಥ ಕೋಟ್ಯಾನ್ ವಂದಿಸಿದರು.

