ವಿಜಯಪುರ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿಜವಾಗಿಯೂ ತಾಖತ್ ಇದ್ದರೆ ಮಸೀದಿ ಹಗೂ ಚರ್ಚ್ಗಳಲ್ಲಿ ನಿಯಂತ್ರಣ ಸಾಧಿಸಿ ತೋರಿಸಲಿ ಎಂದು ವಿಶ್ವಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಬಾಯ್ ತೊಗಾಡಿಯಾ ಸವಾಲು ಹಾಕಿದ್ದಾರೆ.
ಅವರು ವಿಜಯಪುರದ ದರ್ಬಾರ್ ಹೈಸ್ಕೂಲ್ನಲ್ಲಿ ನಡೆದ ವಿಶ್ವಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಹಿಂದೂ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸಿದ್ದು ಅವರು ರಾಜ್ಯದಲ್ಲಿ ಮಠಗಳ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ಹಿಂದೂ ಧರ್ಮದಾಯ ಮತ್ತು ಧಾರ್ಮಿಕ ವಿದೇಯಕಕ್ಕೆ ತಿದ್ದುಪಡಿ ತರಲು ಹೊರಟಿರುವುದು ಸರಿಯಲ್ಲ. ಹಾಗೇನಾದರೂ ಮಾಡಲು ಮನಸ್ಸಿದ್ದರೆ ಮೊದಲು ಚರ್ಚ್ ಹಾಗೂ ಮಸೀದಿಗಳ ಮೇಲೆ ನಿಯಂತ್ರಣ ಸಾಧಿಸಲು ನೋಡಲಿ ಎಂದು ಹೇಳಿದ್ದಾರೆ. ನಂತರ ಮಾತಾಡಿದ ಅವರು ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು. ಮುಸ್ಲಿಮರಿಗಾಗಿ ಪ್ರತ್ಯೇಕ ನಾಗರಿಕ ಸಂಹಿತೆ ಅಗತ್ಯವಿಲ್ಲ. ನಮ್ಮ ಸಂವಿಧಾನದ ಪ್ರಕಾರ ದೇಶದಲ್ಲಿರುವ ಎಲ್ಲರೂ ಸಮಾನರು. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಕೂಡಲೇ ಜಾರಿಯಾಗಬೇಕು ಎಂದು ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
