ವಚನಗಳಲ್ಲಿ ಧರ್ಮಗ್ರಂಥಗಳ ಸಾರ ಸಂಗ್ರಹ
ಸುದ್ದಿ9 ಮೂಡುಬಿದರೆ: ವಚನಗಳು ಶರಣರ ಅಂತರಂಗದ ಅನುಭಾವದ ನೆಲೆಯಲ್ಲಿ ಮೂಡಿಬಂದಂತಹ ಅಮೃತಧಾರೆಯ ನುಡಿಗಳು ಮಾತ್ರವಲ್ಲ ಎಲ್ಲ ಧರ್ಮ ಗ್ರಂಥಗಳ ಸಾರಸಂಗ್ರಹ ವಚನಗಳಲ್ಲಿರುತ್ತದೆ ಎಂದು ಸಾಹಿತಿ, ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ಕಾಂತಾವರ ಅಲ್ಲಮಪ್ರಭು ಪೀಠದ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮದಲ್ಲಿ ಭಾನುವಾರ ಅವರು `ಶರಣರ ವಿಚಾರಧಾರೆ’ ಎಂಬ ವಿಷಯದ ಕುರಿತು ಮಾತನಾಡಿದರು.
ಶ್ರಮ ಸಂಸ್ಕೃತಿಗೆ ಆದ್ಯತೆ ನೀಡಿದ ಶರಣರು ಪೂಜೆಗಿಂತಲೂ ಕಾಯಕವೇ ಕೈಲಾಸವನ್ನು ತಂದುಕೊಡಬಲ್ಲುದು ಎಂಬ ಭಾವವನ್ನು ಬಿತ್ತಿದರು. ಸನ್ಮಾರ್ಗದಿಂದ ಗಳಿಸಿದ ಸಂಪತ್ತನ್ನು ಜನರ ಕಲ್ಯಾಣಕ್ಕೆ ವಿನಿಯೋಗಿಸಿದಾಗ ಮಾತ್ರ ತಮ್ಮ ಆತ್ಮಕಲ್ಯಾಣವಾಗುತ್ತದೆ ಎಂಬ ಸತ್ವವನ್ನೂ ಶರಣರು ಸಮಾಜದಲ್ಲಿ ಸಾರಿದ್ದಾರೆ.
ಸಾಮಾಜಿಕ ಪಿಡುಗಳನ್ನು ತಮ್ಮದೇ ಆಚರಣೆಗಳಿಂದ ತೊಲಗಿಸಲು ಯತ್ನಿಸಿದ ಶರಣರು ನಿಜಾರ್ಥದಲ್ಲಿ ಜಾತ್ಯತೀತ ಸಮಾಜಕ್ಕೆ ಶ್ರಮಿಸಿದಾರೆ ಎಂದು ಅಭಿಪ್ರಾಯಪಟ್ಟರು.
ಪೀಠದ ಗೌರವ ಉಪಾಧ್ಯಕ್ಷ ಸಿ.ಕೆ ಪಡಿವಾಳ್ ಅವರು ಡಾ.ಸಿ.ಸೋಮಶೇಖರ್ ಅವರನ್ನು ಸನ್ಮಾನಿಸಿದರು.
ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯಶೋಧರ್ ಪಿ.ಕರ್ಕೇರಾ ವಂದಿಸಿದರು.

