ಬಂಟ್ವಾಳ:ತಾಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಬೆಟ್ಟು-ಬೋಳಂತೂರು ಸಂಪರ್ಕ ರಸ್ತೆಯು ಸಂಪೂರ್ಣ ಹೊಂಡಮಯವಾಗಿದ್ದು, ಇಲ್ಲಿನ ಗ್ರಾಮೀಣ ಪ್ರದೇಶದ ನೂರಾರು ಮಂದಿ ವಿದ್ಯಾರ್ಥಿಗಳು ಮತ್ತು ನಾಗರಿಕರು ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳಂತೂರು ಗ್ರಾಮೀಣ ಶಾಲಾ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ.

ಕಳೆದ 1959ರಲ್ಲಿ ಆರಂಭಗೊಂಡ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿ ಬರಲು ಇಲ್ಲಿನ ರಸ್ತೆ ಅವ್ಯವಸ್ಥೆಯಿಂದಾಗಿ ಶಿಕ್ಷಕರು ಕೂಡಾ ಹಿಂದೇಟು ಹಾಕುತ್ತಿರುವ ಬಗ್ಗೆ ಸ್ಥಳೀಯರಿಂದ ದೂರು ಕೇಳಿ ಬಂದಿದೆ. ತೀರಾ ಕಿರಿದಾಗಿರುವ ಈ ರಸ್ತೆಯಲ್ಲಿ ವಾಹನ ಓಡಾಟಕ್ಕೂ ದುಸ್ತರವಾಗಿದ್ದು, ಈ ಹಿಂದೆ ಅಳವಗಡಿಸಲಾಗಿರುವ ಡಾಂಬರು ಎದ್ದು ಹೋಗಿ ಎಲ್ಲೆಡೆ ಧೂಳು ಮತ್ತು ಜೆಲ್ಲಿ ಹಾರಾಡುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಭಜನಾ ಮಂದಿರ ಮಾತ್ರವಲ್ಲದೆ ಹಲವಾರು ಮನೆಗಳಿಗೆ ಪ್ರತಿನಿತ್ಯ ಸಂಚರಿಸಲು ಅಸಾಧ್ಯವಾಗಿದ್ದು, ಕೂಡಲೇ ರಸ್ತೆ ದುರಸ್ತಿ ಮತ್ತು ತೇಪೆ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ನಡುವೆ ಪಾಣೆಮಂಗಳೂರಿನ ಕರ್ಬೆಟ್ಟು-ಮೊಗರ್ನಾಡು ರಸ್ತೆಗೆ ಈಗಾಗಲೇ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ರಸ್ತೆ ಡಾಂಬರೀಕರಣ ಕಾಮಗಾರಿ ನಡೆಸಿದ್ದು, ಬೋಳಂತೂರು ರಸ್ತೆ ವಿಸ್ತರಿಸಿ ಸಂಪೂರ್ಣ ಡಾಂಬರೀಕರಣ ಕಾಮಗಾರಿಗೆ ಹೆಚ್ಚಿನ ಮೊತ್ತದ ಅಗತ್ಯವಿರುವ ಹಿನ್ನೆಲೆಯಲ್ಲಿ ಅನುದಾನ ದೊರಕಿಸಿ ಕೊಡುವ ಬಗ್ಗೆಯೂ ಅವರು ಭರವಸೆ ನೀಡಿದ್ದಾರೆ ಎಂದು ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು ಪ್ರತಿಕ್ರಿಯಿಸಿದ್ದಾರೆ.
—
