ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ, ಕೊಳಲಬಾಕಿಮಾರು ಹಾಗೂ ಅಂಗನವಾಡಿಯ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ “ಮಕ್ಕಳ ಸಂಭ್ರಮ – 2026” ಕಾರ್ಯಕ್ರಮವು ನಡೆಸಲಾಯಿತು.
ಕೊಳಲಬಾಕಿಮಾರು ಶಾಲೆಯ ಮಕ್ಕಳಿಂದ ಛದ್ಮವೇಷ ಸ್ಪರ್ಧೆ ನಡೆಯಿತು. ಪುಟ್ಟ ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ತಮ್ಮದೇ ಆದ ಶೈಲಿಯಲ್ಲಿ ಅಭಿನಯಿಸಿ ನೆರೆದ ಜನರ ಮನಸೂರೆಗೊಂಡಿತು.ಅದೇ ರೀತಿ ಅಂಗನವಾಡಿಯ ಪುಟಾಣಿಗಳಿಂದಲೂ ವಿವಿಧ ಛದ್ಮವೇಷ ಸ್ಪರ್ಧೆ ನಡೆಯಿತು. ಚಪ್ಪಾಳೆ, ಹರ್ಷೋದ್ಗಾರಗಳ ನಡುವೆ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಇದೇ ವೇಳೆ ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಕುಮಾರ ಯಕ್ಷಿತ್ ಎಚ್. ಶೆಟ್ಟಿ ಮತ್ತು ಕುಮಾರಿ ಪೂಜಾ ಅವರನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು.
ಕೊಳಲಬಾಕಿಮಾರು ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹಾಡು, ನೃತ್ಯ, ಅಭಿನಯ ಹಾಗೂ ವಿವಿಧ ಪ್ರತಿಭಾ ಪ್ರದರ್ಶನಗಳ ಮೂಲಕ ಮಕ್ಕಳು ತಮ್ಮಲ್ಲಿರುವ ಕಲಾ ಸಾಮರ್ಥ್ಯವನ್ನು ಅನಾವರಣಗೊಳಿಸಿದರು.
ಮಕ್ಕಳ ಸಂಭ್ರಮದ ಜೊತೆಗೆ ಪೋಷಕರಿಗೂ ವಿಶೇಷ ಮನೋರಂಜನಾ ಆಟಗಳನ್ನು ಆಯೋಜಿಸಲಾಗಿತ್ತು.
ಮಕ್ಕಳ ಸಂಭ್ರಮದೊಂದಿಗೆ ಕುಟುಂಬದ ಸಂತೋಷವನ್ನೂ ಹಂಚಿಕೊಳ್ಳುವ ಉದ್ದೇಶದಿಂದ “ಸೀಮಂತ” ಹಾಗೂ “ಅನ್ನಪ್ರಾಶನ ಕಾರ್ಯಕ್ರಮ”ಗಳನ್ನು ನಡೆಸಲಾಯಿತು.
ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ವಿಮಲಾ ಅವರು ಸಭಾ ಕಾರ್ಯಕ್ತಮ ಉದ್ಘಾಟಿಸಿ ಶುಭ ಹಾರೈಸಿದರು.
ಶಾಲಾ ವಿದ್ಯಾರ್ಥಿಗಳಾದ ಕು. ಲಹನ್ವಿ, ಚಾರ್ವಿಶ್ ಹಾಗೂ ಕು. ವಿದ್ಯಾಶ್ರೀ ಅವರು ಮಕ್ಕಳ ದಿನಾಚರಣೆಯ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಶಾಲಾ ವಿದ್ಯಾರ್ಥಿನಿ ಕು. ಜಾನ್ವಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಾಲೆಯ ಅತಿಥಿ ಶಿಕ್ಷಕಿಯಾದ ಖುರ್ಷಿದ್ ಬಾನು,ಅಂಗನವಾಡಿ ಸಮಿತಿ ಅಧ್ಯಕ್ಷರಾದಮಾಲತಿ,ಅಂಗನವಾಡಿ ವಿದ್ಯಾರ್ಥಿ ಚಾರ್ವಿಕ್,ಸ್ಥಳೀಯ ಗ್ರಾ.ಪಂ.ನ ನಿಕಟಪೂರ್ವಸದಸ್ಯರಾದ ಸುಧೀಂದ್ರ ಶೆಟ್ಟಿ, ಅಂಗನವಾಡಿ ಶಿಕ್ಷಕಿಯರಾದ ವನಿತಾ, ಯಶೋಧ, ಆಶಾ ಕಾರ್ಯಕರ್ತೆಯಾದ ಅರುಂಧತಿ, ನಳಿನಿ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಮಂಜುನಾಥ, ಸದಸ್ಯರು, ಅಂಗನವಾಡಿ ಸಮಿತಿ ಸದಸ್ಯರು, ಶಾಲೆಯ ಹಳೆ ವಿದ್ಯಾರ್ಥಿಗಳು,ಮಕ್ಕಳ ಪೋಷಕರು, ಹೆತ್ತವರು,ಸ್ಥಳೀಯ ಪ್ರಮುಖರು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ರಾಜೇಶ ಕೆ ಕಾರ್ಯಕ್ರಮ ನಿರ್ವಹಿಸಿದರು.
