ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯ, ಕಲ್ಲಡ್ಕ ಇದರ ವತಿಯಿಂದ ರಾಷ್ಟ್ರೀಯ ಸಂಸ್ಕಾರ ಶಿಬಿರ “ಉತ್ಥಾನ”ಕಾರ್ಯಕ್ರಮವು ಬುಧವಾರ ನಡೆಯಿತು.

೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ–೨೦೨೬ರ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿ ಮಾತನಾಡಿ ಇಂತಹ ಶಿಬಿರಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತವೆ. ಜೀವನದಲ್ಲಿ ದೊರೆಯುವ ಪ್ರತಿಯೊಂದು ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಾಗ, ಅದು ನಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ,ರಾಷ್ಟ್ರೀಯ ಸಂಸ್ಕಾರ ಶಿಬಿರ ಉತ್ಥಾನ ವಿದ್ಯಾರ್ಥಿನಿಯರ ಜ್ಞಾನ, ಪ್ರತಿಭೆ, ಆತ್ಮವಿಶ್ವಾಸ ಹಾಗೂ ಸಂಸ್ಕಾರವನ್ನು ಬೆಳೆಸುವ ವೇದಿಕೆಯಾಗಿದೆ ಎಂದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಆಡಳಿತ ಮಂಡಳಿ ಸದಸ್ಯರಾದ ನಾಗೇಶ್ ಕಲ್ಲಡ್ಕ, ರಾಷ್ಟ್ರ ಸೇವಿಕಾ ಸಮಿತಿಯ ಹೊಯ್ಸಳ ಪ್ರಾಂತದ ಕಾರ್ಯಕಾರಿಣಿ ಸದಸ್ಯರಾದ ಡಾ. ಕಮಲ ಪ್ರಭಾಕರ್ ಭಟ್, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್ಕಟ್ಟೆ, ಪ್ರಾಂಶುಪಾಲರಾದ ವಸಂತ್ ಬಲ್ಲಾಳ್ ಅವರು ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ಶೈಲಿನಿ ಸ್ವಾಗತಿಸಿದರು,ಚೈತನ್ಯ ಪ್ರಸ್ತಾವನೆಗೈದರು.
ಶೋಭಾ ವಂದಿಸಿದರು.ನಯನ ನಿರ್ವಹಿಸಿದರು.
