ಬಂಟ್ವಾಳ: ಇಲ್ಶ್ರೀಲಿನ ವಿದ್ಯಾಗಿರಿ ಶ್ರೀ ವೆಂಕಟರಮಣಸ್ವಾಮೀ ಮಹಾವಿದ್ಯಾಲಯದಲ್ಲಿ “ಅಂತರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವೆಗಳ ದಿನಾಚರಣೆ” ಪ್ರಯುಕ್ತ ‘ವಸುಂಧರಾ’ ಮಹಿಳಾ ಘಟಕ, ಐ.ಐ.ಸಿ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ ಬಂಟ್ವಾಳ ಇವುಗಳ ಜಂಟಿ ಆಶ್ರಯದಲ್ಲಿ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
 
 ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಾರ್ವಜನಿಕ ಆಸ್ಪತ್ರೆ ಬಂಟ್ವಾಳ ಇದರ ಸ್ರೀರೋಗ ತಜ್ಞೆ ಡಾ|ಬಿ.ಎಸ್.ಜಯಲಕ್ಷ್ಮೀ ಮಾತನಾಡಿ, ಮಹಿಳೆಯರು ಆರೋಗ್ಯ, ದೈಹಿಕ ಮಾನಸಿಕ ಸ್ವಚ್ಛತೆಯ ಕಡೆ ಗಮನ ಕೊಡುವುದರೊಂದಿಗೆ, ಗರ್ಭಧರಿಸಿರುವ ಸಮಯದಲ್ಲಿ ವಿಶೇಷ ಕಾಳಜಿ ವಹಿಸುವುದರಿಂದ ಗರ್ಭಪಾತವನ್ನು ತಡೆಗಟ್ಟಬಹುದೆಂದು ಸಲಹೆ ನೀಡಿದರು. ಅದರಲ್ಲೂ ಅವಿವಾಹಿತ ಮಹಿಳೆಯರು, ವಿದ್ಯಾರ್ಥಿನಿಯರು ಈ ಬಗ್ಗೆ ಪೂರ್ವ ಮಾಹಿತಿ ಪಡೆದುಕೊಳ್ಳುವುದು ಅತೀ ಮುಖ್ಯ ಎಂದು ಹೇಳಿದರು.
 
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಡಿ.ಮಂಚಿ ಮಾತನಾಡಿ ಪ್ರಾಕೃತಿಕವಾಗಿ, ದೈಹಿಕ,ಮಾನಸಿಕವಾಗಿ ಮಹಿಳೆಯರು ಪುರುಷರಿಗಿಂತ ಭಿನ್ನವಾಗಿದ್ದು, ಸದಾ ಆರೋಗ್ಯದ ಕಡೆ ಗಮನ ಹರಿಸುವುದರೊಂದಿಗೆ, ಗರ್ಭಪಾತವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದ್ದು, ಇಂತಹ ಮಾಹಿತಿ ಕಾರ್ಯಕ್ರಮಗಳು ಮಹಿಳೆಯರಿಗೆ ಪ್ರಯೋಜನಕಾರಿ ಎಂದರು. ಕಾರ್ಯಕ್ರಮದ ಸಂಯೋಜಕಿ ಸಹನಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಿವಣ್ಣ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು|ಪ್ರತಿಕ್ಷಾ ಸ್ವಾಗತಿಸಿ, ಕು|ತ್ರಿಶಾಲಿ ಕಾರ್ಯಕ್ರಮ ನಿರ್ವಹಿಸಿ, ಕು|ದಿಶಾ ವಂದಿಸಿದರು.

By Suddi9

Leave a Reply

Your email address will not be published. Required fields are marked *