ಬಂಟ್ವಾಳ: ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ವಕೀಲರ ಸಂಘ (ರಿ), ಬಂಟ್ವಾಳ ಪೊಲೀಸ್ ಇಲಾಖೆ, ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಬಂಟ್ವಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಪೌಷ್ಟಿಕ ಆಹಾರ ಸಪ್ತಾಹದ ಪ್ರಯುಕ್ತ ಕಾನೂನು ಮಾಹಿತಿ ಕಾರ್ಯಕ್ರಮ ಬಿ ಸಿ ರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು.

ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಅನಿಲ್ ಪ್ರಕಾಶ್ ಎಂ ಪಿ ಅವರು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೈನಂದಿನ ಜೀವನದಲ್ಲಿ ವ್ಯಾಯಾಮದ ಕೊರತೆ, ಆಹಾರದ ಗುಣಮಟ್ಟ, ಅಸುರಕ್ಷಿತ ಆಹಾರ ಇವೆಲ್ಲದರ ಕುರಿತು ಜಾಗೃತಿ ವಹಿಸುವಂತೆ ಕರೆ ನೀಡಿದರು.ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಅವರುಸುರಕ್ಷಿತ ಆಹಾರ-ಉತ್ತಮ ಅರೋಗ್ಯ-ಸಂತೋಷದ ಜೀವನ” ವಿಷಯದ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ಶ್ರೀಮತಿ ಆಶಾಮಣಿ ಡಿ ರೈ ಅವರು ಪೌಷ್ಟಿಕಾಂಶ ದಿನದ ಪ್ರಯುಕ್ತ ಪೌಷ್ಟಿಕ ಆಹಾರದ ಸುರಕ್ಷತೆ ಮತ್ತು ಪೋಷಣೆ ಹಾಗೂ ಕಾನೂನಾತ್ಮಕ ಹಕ್ಕುಗಳ ಕುರಿತಾದ ಮಾಹಿತಿ ನೀಡಿದರು.
ಬಂಟ್ವಾಳ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ನೂರಾ ಬಿ ಅವರು ಗರ್ಭಿಣಿ, ಬಾಣಂತಿ ಆಹಾರ, ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೆ ಒದಗಿಸಬೇಕಾದ ಆಹಾರ, ಕಿಶೋರಾವಸ್ಥೆ ಆಹಾರ, ತಾಯಂದಿರ ಆಹಾರ ಹಾಗೂ ಪೌಷ್ಟಿಕಯುಕ್ತ ಆಹಾರದ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ ಐ ದುರ್ಗಪ್ಪ ಅವರು, 112 ಸಹಾಯವಾಣಿಯ ಸದುಪಯೋಗದ ಬಗ್ಗೆ ಮಾಹಿತಿನೀಡಿದರು. ಬಂಟ್ವಾಳ ವಕೀಲರ ಸಂಘದ ಜೊತೆ ಕಾರ್ಯದರ್ಶಿ ಅಕ್ಷತಾ ಶೆಟ್ಟಿ ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಮುಬೀನಾ ಬಾನು ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಯಶೋಧ ವಂದಿಸಿದರು. ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಾಲಿನಿ ಶೆಟ್ಟಿ ನಿರೂಪಿಸಿದರು,
