ಬಂಟ್ವಾಳ: ಕೆಎಸ್‌ಆರ್‌ಟಿಸಿಯ ಬಿ.ಸಿ.ರೋಡ್ ಡಿಪೋದಲ್ಲಿ ಸಿಬ್ಬಂದಿಗಳಿಗಾಗಿ ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.

ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತಕ್ಷಣದ ನೆರವು ನೀಡುವ ನಿಟ್ಟಿನಲ್ಲಿ ಆಯೋಜಿಸಲಾದ ಈ ತರಬೇತಿ ಕಾರ್ಯಕ್ರಮದಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ , ತುಂಬೆ ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜ್ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಭಾಗವಹಿಸಿ ತರಬೇತಿ ನೀಡಿದರು.
ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿಯ ಡಾ. ಅನಂತ್ ಕೃಷ್ಣ ಸೋಮಯಾಜಿ, ಡಾ. ಕಾರ್ತಿಕ್ , ಡಾ.ಅಮಿತ್ ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರೀನಾ ಫ್ರಾಂಕ್ ಅವರು ಭಾಗವಹಿಸಿ, ಸಿಪಿಆರ್, ಪ್ರಥಮ ಚಿಕಿತ್ಸೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಿಬ್ಬಂದಿಗೆ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಿದರು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಪಿಆರ್‌ಒ ತ್ರಿವೇಣಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸಿಬ್ಬಂದಿಗೆ ನೀಡಲಾದ ಈ ತರಬೇತಿಯು ತುರ್ತು ಸಂದರ್ಭಗಳಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಹಾಗೂ ಅಗತ್ಯವಿರುವ ಸಂದರ್ಭದಲ್ಲಿ ಜೀವ ರಕ್ಷಕ ಪ್ರಥಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಬಿ.ಸಿ.ರೋಡ್ ಡಿಪೋ ಮ್ಯಾನೇಜರ್ ಪಿ. ಇಸ್ಮಾಯಿಲ್ ತಿಳಿಸಿದರು.
ಎಡಬ್ಲ್ಯುಎಸ್ ವಿನಯಾ ಜಿ. ರೈ ಅವರು ಸಹಕರಿಸಿದರು. ಪ್ರಭಾವತಿ ನಿರೂಪಿಸಿದರು.
