ಪುತ್ತೂರು: ದೈವಸ್ಥಾನಕ್ಕೆ ಬರುತ್ತಿದ್ದ ಮಹಿಳೆಯೋರ್ವರಿಗೆ ಮಾರುತಿ ಓಮ್ನಿಯೊಂದು ಡಿಕ್ಕಿಯಾಗಿ ಅವರು ಮೃತ ಪಟ್ಟ ಘಟನೆ ಕಬಕದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕಬಕಬೈಲು ನಿವಾಸಿ ಗಿರಿಯಪ್ಪ ಗೌಡರ ಪತ್ನಿ ಕುಸುಮ(35) ಮೃತ ದುರ್ದೈವಿ. ಘಟನೆಯಲ್ಲಿ ಪುತ್ತೂರು ನಗರ ಠಾಣೆಯ ಎಸ್‍ಐ ಅಬ್ದುಲ್ ಖಾದರ್ ಅವರು ಸ್ಥಳೀಯರನ್ನು ದೂಡಿದ ಆರೋಪ ವ್ಯಕ್ತವಾಯಿತು.

ಕಬಕ ಅಡ್ಯಾರಗೂಳಿ ಅಡ್ಯಾಲಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ನಿಮಿತ್ತ ಕರಸೇವೆಗೆಂದು ಕುಸುಮಾರವರು ತನ್ನ ಮನೆಯವರ ಹಾಗೂ ಸ್ಥಳೀಯರ ಜೊತೆ ನಿನ್ನೆ ಮುಸ್ಸಂಜೆ ವೇಳೆ ಪುತ್ತೂರು ಮಂಗ ಳೂರು ರಸ್ತೆ ಬದಿಯಲ್ಲಿ ನಡೆದು ಕೊಂಡು ಬರುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಕಬಕ ಕಡೆಗೆ ಬರುತ್ತಿದ್ದ ಮಾರುತಿ ಓಮ್ನಿ ಅವರಿಗೆ ಡಿಕ್ಕಿ ಹೊಡೆದು ಒದ್ದಾಡಲಾರಂ ಭಿಸಿದರು. ರಕ್ತದ ಮಡುವಿ ನಲ್ಲಿ ಒದ್ದಾಡುತ್ತಿ ರುವುದನ್ನು ಕಂಡ ಅದೇ ದಾರಿಯಿಂದಾಗಿ ಬಂದ ಕಬಕ ಗ್ರಾ.ಪಂ. ಉಪಾಧ್ಯಕ್ಷ ಶಾಬಾರವರ ಜೊತೆ ಬರುತ್ತಿದ್ದ ಕುಸುಮಾರವರ ಪತಿ ಗಿರಿಯಪ್ಪರವರು ಹಾಗೂ ಸ್ಥಳೀಯರು ಸೇರಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ಪತಿ ಗಿರಿಯಪ್ಪ ಈರ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಅಪಘಾತ ಎಸಗಿದ ಮಾರುತಿ ಓಮ್ನಿ ಮತ್ತು ಚಾಲಕ ಫಾರೂಕ್‍ರವರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.
ಮಾಹಿತಿ ತಿಳಿದ ಹಲವಾರು ಮಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಎಸ್.ಐ. ಅಬ್ದುಲ್ ಖಾದರ್ ಸೇರಿದ್ದ ಜನರನ್ನು ತೆರಳುವಂತೆ ಸೂಚಿಸಿದರಲ್ಲದೆ ಕೆಲವರನ್ನು ದೂಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ನಾಗರಿಕರು ಆರೋಪಿಸಿದ್ದಾರೆ. ಎಸ್.ಐ.ಯವರ ಈ ವರ್ತನೆಯಿಂದ ಘಟನಾ ಸ್ಥಳದಲ್ಲಿ ಅಲ್ಪ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಇದನ್ನು ಅರಿತ ನಗರ ಠಾಣಾ ಇನ್ಸ್‍ಪೆಕ್ಟರ್ ಬಿ.ಕೆ.ಮಂಜಯ್ಯರವರು ಸ್ಥಳಕ್ಕೆ ತೆರಳಿ ಉದ್ರಿಕ್ತ ನಾಗರಿಕರನ್ನು ಸಮಾಧಾನಿಸಿ ಅಪಘಾತ ನಡೆಸಿದ ಓಮ್ನಿಯನ್ನು ಹಾಗೂ ಅದರ ಚಾಲಕನನ್ನು ಠಾಣೆಗೆ ಕರೆತಂದರು. ಎಸ್ ಐ ವಿರುದ್ಧ ಠಾಣೆಯೆದುರೇ ಜನರು ಧಿಕ್ಕಾರ ಕೂಗಿದರು.

