ಬಂಟ್ವಾಳ: ಬಂಟ್ವಾಳ ವಕೀಲರ ಸಂಘ (ರಿ.) ವತಿಯಿಂದ ಶುಕ್ರವಾರ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯದ ವಕೀಲರ ಸಂಘದ ಸಭಾಂಗಣದಲ್ಲಿ ‘ಆಟಿದ ಲೇಸ್’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಬಂಟ್ವಾಳ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ.ಪಿ. ಉದ್ಘಾಟಿಸಿ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಿ ನಡೆಯಬೇಕು. ಯುವಜನಾಂಗಕ್ಕೆ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಆಟಿ ತಿಂಗಳು ನಮ್ಮ ಹಳೆಯ ಜೀವನಶೈಲಿ ಹಾಗೂ ಸಂಸ್ಕೃತಿಯ ನೆನಪುಗಳನ್ನು ಮರುಕಳಿಸುವ ಕಾಲವಾಗಿದೆ. ಹಿಂದೆ ಮಳೆಗಾಲದಲ್ಲಿ ನಿರಂತರ ಮಳೆಯಿಂದ ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರು ಮನೆಯೊಳಗೆ ವಿವಿಧ ಆಟಗಳನ್ನು ಆಡುತ್ತಿದ್ದರು. ಅಲ್ಲದೆ, ಆರೋಗ್ಯ ಕಾಪಾಡುವ ಉದ್ದೇಶದಿಂದ ತಯಾರಿಸಿ ಸೇವಿಸುತ್ತಿದ್ದ ಸಾಂಪ್ರದಾಯಿಕ ಆಟಿ ತಿಂಗಳ ಆಹಾರ ಪದಾರ್ಥಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚಾರ್ಡ್ ಕೋಸ್ತ ಎಂ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಕೆ.ಎಸ್., ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಕುಮಾರಿ ಸೌಂದರ್ಯ ಎಂ., ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹಾಗೂ ಕೆಎಸ್‌ಬಿಸಿ ಸದಸ್ಯ ಪಿ.ಪಿ. ಹೆಗ್ಡೆ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ ಕೆ. ಶೇನವ , ನರೇಂದ್ರ ನಾಥ್‌ ಭಂಡಾರಿ  ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಬಂಟ್ವಾಳದ ಹಿರಿಯ ವಕೀಲ ಜಯರಾಮ್ ರೈ ಅವರು ಆಟಿ ತಿಂಗಳ ವಿಶೇಷತೆ ಮತ್ತು ಅದರ ಸಾಂಸ್ಕೃತಿಕ ಮಹತ್ವದ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹಾಗೂ ಕೆಎಸ್‌ಬಿಸಿ ಸದಸ್ಯ ಪಿ.ಪಿ. ಹೆಗ್ಡೆ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ ಕೆ. ಶೇನವ ಅವರನ್ನು ಗೌರವಿಸಲಾಯಿತು.
ವಕೀಲರಾದ ದಯಾನಂದ ರೈ ಸ್ವಾಗತಿಸಿ,ವಿರೇಂದ್ರ ವಂದಿಸಿದರು.
ರವೀಂದ್ರ ಕುಕ್ಕಾಜೆ ಮತ್ತು ದೀಪಕ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *