ಬಂಟ್ವಾಳ: ಹಿಂದು ಜಾಗರಣಾ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಜಿಲ್ಲೆಯ ಕಲ್ಲಡ್ಕ, ತಲಪಾಡಿ ದೇವಿಪುರ, ವಾಮದಪದವು, ಮೂಡುಬಿದಿರೆ ಹಾಗೂ ಬಿ.ಸಿ.ರೋಡ್ ಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ನಿಮಿತ್ತ ಜಾಥಾ ಹಾಗೂ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆಎಂದು
ಹಿ. ಜಾ. ವೇ.ಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ತಿಳಿಸಿದ್ದಾರೆ.

ಶನಿವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸಭಾ ಕಾರ್ಯಕ್ರಮಗಳಲ್ಲಿ ಪ್ರಮುಖ ನಾಯಕರು ಭಾಗವಹಿಸಿ ದಿಕ್ಕೂಚಿ ಭಾಷಣ ಮಾಡಲಿರುವರು.
ಆಗಸ್ಟ್ 9ರಂದು ವಿಟ್ಲ ತಾಲೂಕು ವ್ಯಾಪ್ತಿಯಲ್ಲಿ ಸಂಜೆ 3 ಗಂಟೆಗೆ ಮಾಣಿ ಜಂಕ್ಷನ್, ವೀರಕಂಬ ಗಣೇಶ ಮಂದಿರ ಹಾಗೂ ಪಾಣೆಮಂಗಳೂರು ಸತ್ಯದೇವತೆ ದೈವಸ್ಥಾನದಿಂದ ಏಕಕಾಲದಲ್ಲಿ ವಾಹನ ಜಾಥಾಗಳು ಆರಂಭವಾಗಲಿವೆ. ಮೂರು ಜಾಥಾಗಳು ಕಲ್ಲಡ್ಕಕ್ಕೆ ಆಗಮಿಸಲಿದ್ದು, ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಅದೇ ದಿನ ಸಂಜೆ 3 ಗಂಟೆಗೆ ತಲಪಾಡಿ ಮಹಾದ್ವಾರದ ಬಳಿಯಿಂದ ವಾಹನ ಜಾಥಾ ಆರಂಭವಾಗಲಿದೆ. ಬಳಿಕ ತಲಪಾಡಿ ದೇವಿಪುರ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 6.30ಕ್ಕೆ ವಾಮದಪದವಿನಲ್ಲಿ ಗಣೇಶ ಮಂದಿರದ ವಠಾರದಿಂದ ಪಂಜಿನ ಮೆರವಣಿಗೆ ನಡೆಯಲಿದ್ದು, ಪೇಟೆ ಸಂಚರಿಸಿ ಬಳಿಕ ಗಣೇಶ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಅದೇರೀತಿ ಸಂಜೆ 6.30ಕ್ಕೆ ಮೂಡುಬಿದಿರೆ ಸಾವಿರ ಕಂಬ ಬಸದಿ ಬಳಿಯಿಂದ ಪಂಜಿನ ಮೆರವಣಿಗೆ ಆರಂಭವಾಗಿ ಪೇಟೆಯ ಮೂಲಕ ಸಮಾಜ ಮಂದಿರಕ್ಕೆ ತೆರಳಿ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮಾರೋಪ ಕಾರ್ಯಕ್ರಮವು ಆಗಸ್ಟ್ 14ರಂದು ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದ್ದು, ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಪಂಜಿನ ಮೆರವಣಿಗೆ ಆರಂಭಗೊಂಡು ಸ್ಪರ್ಶ ಕಲಾ ಮಂದಿರವರೆಗೆ ಸಾಗಿ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ರಸ್ತೆ ಬದಿ ವ್ಯಾಪರಕ್ಕೆ ಕಡಿವಾಣ ಹಾಕಿ:
ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ಸರ್ಕಲ್ಗಳ ಬಳಿ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕು. ರಸ್ತೆ ಮೇಲೆ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ನಡೆಸುವುದಕ್ಕೆ ಕಡಿವಾಣ ಹಾಕಬೇಕು ಎಂದು ನರಸಿಂಹ ಮಾಣಿ ಈ ಸಂದರ್ಭ ಆಗ್ರಹಿಸಿದರು.
ಬಿ.ಸಿ.ರೋಡು ಸರ್ಕಲ್ ಸಮೀಪ ಮಸೀದಿಯ ಮುಂಭಾಗದ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಹೋಗುತ್ತಿರುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆಯಲ್ಲದೆ ಅಪಘಾತಗಳಿಗೂ ಕಾರಣವಾಗುತ್ತಿದೆ ಎಂದು ಆರೋಪಿಸಿದರು.
ಈ ಸಮಸ್ಯೆಯ ಕುರಿತು ಹಿಂದೂ ಜಾಗರಣ ವೇದಿಕೆ ವತಿಯಿಂದ ಈ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಸಮಸ್ಯೆ ಮುಂದುವರಿದಿದ್ದು, ಮತ್ತೆ ಮತ್ತೆ ಅಪಘಾತಗಳು ಸಂಭವಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ವಿಳಂಬಿಸದೆ ಸ್ಥಳ ಪರಿಶೀಲನೆ ನಡೆಸಿ, ರಸ್ತೆ ಬದಿಯ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು,ಅದೇರೀತಿ
ಅಪಘಾತ ಹಾಗೂ ಸಂಚಾರ ನಿಯಮ ಉಲ್ಲಂಘನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಿರ್ದಿಷ್ಠ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.
