ಬಂಟ್ವಾಳ:ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿಯೇ ಬಂಟ್ವಾಳ ಸಂಚಾರಿ ಪೊಲೀಸರು ವಾಹನಗಳನ್ನು ನಡು ರಸ್ತೆಯಲ್ಲೇ ತಡೆದು ನಿಲ್ಲಿಸಿ ದಾಖಲೆ ಪರಿಶೀಲನೆ ನಡೆಸುವುದಲ್ಲದೆ ದಂಡ ವಸೂಲಿಯಲ್ಲಿ ನಿರತರಾಗುವ ಹಿನ್ನಲೆಯಲ್ಲಿ ಸಂಚಾರ ದಟ್ಟಣೆ ಮತ್ತು ಅಪಘಾತದ ಸಾಧ್ಯತೆ ಹೆಚ್ಚುತ್ತಿದ್ದು,ಇಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಕ್ಷೇತ್ರ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ನೇತೃತ್ವದ ನಿಯೋಗ ಶುಕ್ರವಾರ ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನು ಭೇಟಿಯಾಗಿ ಪ್ರಸ್ತುತ ಸಿಸಿ ಕ್ಯಾಮರಾ ಸೇರಿದಂತೆ ಡಿಜಿಟಲ್ ತಂತ್ರಜ್ಞಾನ ಲಭ್ಯವಿರುವ ಹಿನ್ನೆಲೆಯಲ್ಲಿ ವಾಹನಗಳನ್ನು ನಿಲ್ಲಿಸದೆ ಡಿಜಿಟಲ್ ವ್ಯವಸ್ಥೆಯ ಮೂಲಕ ದಾಖಲೆ ಪರಿಶೀಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚುವ ಕ್ರಮವನ್ನು ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬಿ.ಸಿ.ರೋಡ್ನ ಗಾಣದಪಡ್ಪುವಿನಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತದವರೆಗಿನ ಚತುಷ್ಪಥ ರಸ್ತೆ ಕಾಮಗಾರಿಯನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಬೇಕು. ನಾಲ್ಕು ರಸ್ತೆಗಳು ಕೂಡುವ ಈ ವೃತ್ತದಲ್ಲಿ ಸಂಚಾರ ಸಿಗ್ನಲ್ ಅಳವಡಿಸುವ ಮೂಲಕ ವಾಹನ ಸಂಚಾರವನ್ನು ಸುಗಮಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವೃತ್ತದ ಸುತ್ತಮುತ್ತ ರಸ್ತೆ ಬದಿಯಲ್ಲಿ ಅನಧಿಕೃತವಾಗಿರುವ ಗೂಡಂಗಡಿ,ಪಾಸ್ಟ್ ಪುಡ್ ಗಳ ಮುಂದೆ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಖರೀದಿಯ ಭರಾಟೆ ಹೆಚ್ಚುತ್ತಿದ್ದು, ಇದರಿಂದ ಸಂಚಾರಕ್ಕೆ ಅಡಚಣೆ ಹಾಗೂ ಅಪಘಾತದ ಸಾಧ್ಯತೆ ಉಂಟಾಗುತ್ತಿದೆ. ಹೀಗಾಗಿ ಅನಧಿಕೃತ ರಸ್ತೆಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಮನವಿಯಲ್ಲಿ ಕೋರಲಾಗಿದೆ.
ನಿಯೋಗದಲ್ಲಿಯುವ ಮೋರ್ಚಾ ಅಧ್ಯಕ್ಷರಾದ ದಿನೇಶ್ ಶೆಟ್ಟಿ ದಂಬೆದಾರು, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್,ಪ್ರಶಾಂತ್ ಪೂಜಾರಿ,ಹೇಮಂತ್ ಶಂಬೂರ್,ಗಣೇಶ್ ಪಲ್ಲಮಜಲು,ಅಶೋಕ್ ಕುಲಾಲ್ ಮರ್ದೋಳಿ,ಹಿ. ಜಾ. ವೇ. ಯ ಪ್ರಮುಖರಾದ ಪ್ರಶಾಂತ್ ಕೆಂಪುಗುಡ್ಡೆ, ಅನೂಪ್ ಮಯ್ಯ, ಶಶಿಕಾಂತ್ ಶೆಟ್ಟಿ ಆರ್ಮುಡಿ ಉಪಸ್ಥಿತರಿದ್ದರು
