ಚಾಲಕ ಸಹಿತ ಪ್ರಯಾಣಿಕರಿಗೆ ಗಾಯ
ಗುರುಪುರ : ಮಂಗಳೂರು-ಮೂಡಬಿದ್ರೆ ರಾಷ್ಟ್ರೀ ಯ ಹೆದ್ದಾರಿ ೧೬೯ರ ಗಂಜಿಮಠ ಸೂರಲ್ಪಾಡಿಯಲ್ಲಿ ನಿರ್ಮಿಸಲಾಗುತ್ತಿರುವ ನೂತನ ಟೋಲ್ ಗೇಟ್ ಪ್ರದೇಶದಲ್ಲಿ ಭಾನುವಾರ ಅಪರಾಹ್ನ ೫:೨೦ ಸುಮಾರಿಗೆ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಎಕ್ಸ್ಪ್ರೆಸ್ ಬಸ್ ರಸ್ತೆ ಬದಿಯಲ್ಲಿದ್ದ ಸಿಮೆಂಟ್ ಬ್ಯಾರಿಕೇಡ್‌ಗೆ(ಸ್ಲ್ಯಾಬ್) ಡಿಕ್ಕಿಯಾದ ಅಪಘಾತದಲ್ಲಿ ಬಸ್ ಚಾಲಕನ ಸಹಿತ ಒಂದಿಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸೂರಲ್ಪಾಡಿಯಲ್ಲಿ ವೇಗವಾಗಿ ಸಾಗುತ್ತಿದ್ದ ಟಿಪ್ಪರ್ ಲಾರಿಯೊಂದು ಏಕಾಏಕಿಯಾಗಿ ಎಡಕ್ಕೆ ತಿರುಗಿದಾಗ ಹಿಂದಿನಿಂದ ಕಾರ್ಕಳದಿಂದ ಮಂಗಳೂರಿನತ್ತ ಸಾಗುತ್ತಿದ್ದ ಎಕ್ಸ್ಪ್ರೆಸ್ ಬಸ್, ಅಪಘಾತ ತಪ್ಪಿಸಲು ಬಲಕ್ಕೆ ತಿರುಗಿಸಿದಾಗ ಸಿಮೆಂಟ್ ಬ್ಯಾರಿಕೇಡ್‌ಗಳಿಗೆ ಡಿಕ್ಕಿಯಾಗಿದೆ. ಬಸ್‌ನ ಎದುರು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಯಾಳುಗಳ ಚಿಕಿತ್ಸೆಗೆ ಸ್ಥಳೀಯರು ನೆರವಾಗಿದ್ದು, ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಬಜ್ಪೆ ಪೊಲೀಸರು ತನಿಖೆ ನಡೆಸಿದ್ದಾರೆ.
ಅಪಘಾತ ಸಂಭವಿಸಿದ ವೇಳೆ ಬಸ್‌ನಲ್ಲಿ ಸುಮಾರು ೩೫ ಪ್ರಯಾಣಿಕರಿದ್ದರು. ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಅಡ್ಡಾದಿಡ್ಡಿಯಾಗಿ ನಡೆಯುತ್ತಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಬಸ್ ಇನ್ನಷ್ಟು ಮುಂದಕ್ಕೆ ಚಲಿಸುತ್ತಿದ್ದರೆ ಅಫಘಾತದ ತೀವ್ರತೆ ಇನ್ನೂ ಹೆಚ್ಚಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ಸಮೀರ್ ಸೂರಲ್ಪಾಡಿ ಹೇಳಿದ್ದಾರೆ.
