ಬಂಟ್ವಾಳ :ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ  ಗುರುವಾರ ಸಂಜೆ ಕಕ್ಕೆಪದವಿನ  ಮೈರಾ ನಿವಾಸಿ ಬಾಳಪ್ಪ ಗೌಡ ಅವರ ಪುತ್ರಿ ಲಾವಣ್ಯ( 23) ಎಂಬಾಕೆಯನ್ನು  ಸಿನಿಮೀಯಾ ರೀತಿಯಲ್ಲಿ ಸಾರ್ವಜನಿಕರ ಎದುರಲ್ಲೇ ಮಾರಕಾಸ್ತ್ರದಿಂದ  ಪೈಶಾಚಿಕವಾಗಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಂತಕ ಚೇತನ್ ನನ್ನು ಬಂಧಿಸಿದ್ದಾರೆ.
ಘಟನೆ ನಡೆದ 24 ಗಂಟೆಯೊಳಗೇ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಂಗಳೂರು ಸಮೀಪದ ವಾಮಂಜೂರು ಪಚ್ಚನಾಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಆರೋಪಿ ಆತ್ಮಹತ್ಯೆಗೆ ಯತ್ನ:
ಕೃತ್ಯದ ಬಳಿಕ ಮಚ್ಚನ್ನು ಸ್ಥಳದಲ್ಲೆ ಎಸೆದು ತನ್ನ ಸ್ನೇಹಿತನ  ಅಲ್ಟೋ ಕಾರೊಂದರಲ್ಲಿ  ಪರಾರಿಯಾಗಿದ್ದ ಆರೋಪಿ ಚೇತನ್ ಇಲಿ ಪಾಷಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.ಘಟನೆಯಾದ ಕೆಲ ಹೊತ್ತಿನಲ್ಲೆ ಆತ ಆತ್ಮಹತ್ಯೆಗೆ ಯತ್ನಿಸಿ ರಬಹುದೆಂಬ ಊಹಾಪೋಹಗಳು ಕೂಡ ಹರಡಿದ್ದವು. ಆದರೆ ಶುಕ್ತವಾರ ಮುಂಜಾನೆ ಸುಮಾರು 2.30 ರಿಂದ 3 ಗಂಟೆಯ ನಡುವೆ ಆರೋಪಿಯ ಮೊಬೈಲ್ ಮತ್ತೆ ಸ್ವಿಚ್ ಆನ್ ಆಗಿದ್ದು, ಮೊಬೈಲ್ ಲೊಕೇಶನ್  ಆಧಾರದಲ್ಲಿ  ಆತನ ಚಲನವಲನವನ್ನು ಪತ್ತೆಹಚ್ಚಿದ ಪೊಲೀಸ್ ತಂಡ ಮಂಗಳೂರಿನ ವಾಮಂಜೂರು ಸಮೀಪದ ಪಚ್ಚನಾಡಿ ಪ್ರದೇಶದಲ್ಲಿ ಆರೋಪಿಯನ್ನು ಆಲ್ಟೋ ಕಾರು ಸಮೇತ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ಇಲಿಪಾಷಣ ಸೇವಿಸಿರುವ ಬಗ್ಗೆ  ಆತ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಅತನನ್ನು‌ ಬಂಟ್ವಾಳ ಸರಕಾರಿ ಆಸ್ಪತ್ರೆಗೆ  ದಾಖಲಿಸಲಿಸಿದ್ದರು. ಆಸ್ಪತ್ರೆಯಲ್ಲಿ ಆರೋಪಿಗೆ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆರೋಪಿ ಚೇತರಿಸಿಕೊಂಡ  ಬಳಿಕ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಶುಕ್ರವಾರ
ಮಧ್ಯಾಹ್ನದ ಬಳಿಕ‌ ಹೆಚ್ಚಿನ ಚಿಕಿತ್ಸೆಗಾಗಿ‌ ಆರೋಪಿ ಚೇತನನ್ನು ಬಂಟ್ವಾಳ ಸರಕಾರಿ‌ಆಸ್ಪತ್ರೆಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಂದಿನಂತೆ ಗುರುವಾರ ಸಾಯಂಕಾಲ  ಕೆಲಸ ಮುಗಿಸಿ ಮನೆಗೆ ಹಿಂತಿರುಗಲು ಬಿ.ಸಿ. ರೋಡಿನಿಂದ ಕಕ್ಯಪದವು ಹೋಗುವ ಸರಕಾರಿ ಬಸ್ಸಿನಲ್ಲಿ ಯುವತಿ ಕುಳಿತಿದ್ದಾಗ ಏಕಾಏಕಿ ಆರೋಪಿ ಚೇತನ್ ಬಸ್ಸಿನ ಒಳಗಡೆ ಬಂದು ಹೊರಗಡೆ ಎಳೆದೊಯ್ದು ಮಚ್ಚಿನಿಂದ ದಾಳಿ ನಡೆಸಿದ್ದ.ಸಿನಿಮೀಯಾ ರೀತಿಯಲ್ಲಿ‌ ಹಾಡಹಗಲೇ ನಡೆದ ಈ ಭಯಾನಕ ಘಟನೆ ಜನರಲ್ಲಿ ಅತಂಕಕ್ಕೀಡು ಮಾಡಿತ್ತಲ್ಲದೆ ತಲ್ಲಣಕ್ಕು ಕಾರಣವಾಗಿದೆ.

ಆರೋಪಿ ಚೇತನ್ ಯುವತಿಯ ದೂರದ ಸಂಬಂಧಿಯಾಗಿದ್ದು, ಪ್ರೀತಿ  ನಿರಾಕರಣೆಯ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಈಗಾಗಲೇ ಕಂಡು ಕೊಂಡಿದ್ದಾರೆ.
ಲಾವಣ್ಯ ಗೌಡ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಡೆಸಿ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.
ಕಲ್ಲಡ್ಕದಲ್ಲಿ‌ಅಂತಿಮ ದರ್ಶನ:

ಮರಣೋತ್ತರ ಪರೀಕ್ಷೆಯ ಬಳಿಕಲಾವಣ್ಯ ಅವರ ಮೃತಶರೀರವನ್ನ ಮನೆಗೆ ಸಾಗಿಸುತ್ತಿದ್ದ ವೇಳೆ ಅವರು ಉದ್ಯೋಗ ಮಾಡುತ್ತಿದ್ದ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ ಮುಂಭಾಗದಲ್ಲಿ ವಾಹನ ನಿಲ್ಲಿಸಿ ಸಹದ್ಯೋಗಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಆಸ್ಪತ್ರೆಯ ಸಿಬ್ಬಂದಿ, ಸ್ನೇಹಿತರು ಹಾಗೂ ಸ್ಥಳೀಯರು ಕಣ್ಣೀರಿನ ವಿದಾಯ ಸಲ್ಲಿಸಿದರು.

ಅಲ್ಲಿಂದ ಮೃತದೇಹವನ್ನು ಕಕ್ಯಪದವು ಜಂಕ್ಷನ್‌ಗೆ ತರಲಾಗಿದ್ದು, ಅಲ್ಲಿಯೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಕೆಲಕಾಲ ಅವಕಾಶ ಕಲ್ಪಿಸಲಾಯಿತು.
ತದ  ನಂತರ ಸ್ವಗ್ರಾಮಕ್ಕೆ ಕೊಂಡೊಯ್ಯಲಾಯಿತು. ಲಾವಣ್ಯ ಅವರ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು, ನೆರೆದಿದ್ದ ಬಂಧುಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು.
ಈ ಕೃತ್ಯವೆಸಗಿದ ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು,ಇಂತಹ ಘಟನೆಗಳು ಸಮಾಜದಲ್ಲಿ ಮತ್ತೆ ಮರುಕಳಿಸದಂತೆ ಸರ್ಕಾರ ಹಾಗೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು.

ಬಳಿಕ ಕುಟುಂಬದ ಸದಸ್ಯರು ಹಾಗೂ ಬಂಧುಗಳ ಸಮ್ಮುಖದಲ್ಲಿ ಮನೆಸಮೀಪ  ಅವರಿಗೆ ಸೇರಿದ ಸ್ಥಳದಲ್ಲಿ ಲಾವಣ್ಯಳ ಅಂತ್ಯಕ್ರಿಯೆಯ ವಿಧಿವಿಧಾನಗಳು ನೆರವೇರಿಸಲಾಯಿತು.
ಈ ಘಟನೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಪ್ರೀತಿಯ ಹೆಸರಿನಲ್ಲಿ ನಡೆದ ಈ ಬರ್ಬರ ಕೃತ್ಯ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಕುರಿತು ಮತ್ತೆ ಗಂಭೀರ ಚರ್ಚೆಗೂ ಕಾರಣವಾಗಿದೆ.
ಲಾವಣ್ಯಳ ಸಾವಿನ ಹಿನ್ನಲೆಯಲ್ಲಿ ಕಕ್ಕೆಪದವು ಪರಿಸರವಿಡೀ ಸ್ಮಶಾನ ಮೌನ ಅವರಿಸಿದೆ.

By Suddi9

Leave a Reply

Your email address will not be published. Required fields are marked *