ಬಂಟ್ವಾಳ:   ಭಾರತೀಯ ಜನತಾ ಪಕ್ಷದ ಬಂಟ್ವಾಳ ಮಂಡಲಕ್ಜೊಳಪಟ್ಟ ರಾಯಿ ಹಾಗೂ ಕೊಯಿಲ ಗ್ರಾಮಗಳ ಕಾರ್ಯಕರ್ತರ ಸಂಘಟನಾತ್ಮಕ ಸಭೆಯು   ನಡೆಯಿತು.
ಸಭೆಯಲ್ಲಿ ಪಕ್ಷದ ಸಂಘಟನಾ ಬಲವರ್ಧನೆ, ಬೂತ್ ಮಟ್ಟದ ಕಾರ್ಯಚಟುವಟಿಕೆಗಳ ಚುರುಕುಗೊಳಿಸುವಿಕೆ ಹಾಗೂ ಎಸ್ ಐ ಆರ್ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಖರವಾದ ಮತದಾರರ ಪಟ್ಟಿಗೆ ಅತ್ಯಂತ ಮಹತ್ವವಿದ್ದು, ಮತದಾರರ ಪಟ್ಟಿಯ ವಿಶೇಷ  ಪರಿಷ್ಕರಣೆ  ಅಭಿಯಾನದಲ್ಲಿ ಪ್ರತಿಯೋರ್ವ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.

ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವುದು, ಹೊಸದಾಗಿ ಮತದಾನದ ಅರ್ಹತೆ ಪಡೆದ ಯುವಜನರ ಹೆಸರನ್ನು ಪಟ್ಟಿಗೆ ಸೇರ್ಪಡೆಗೊಳಿಸುವುದು, ಸ್ಥಳಾಂತರಗೊಂಡ ಅಥವಾ ಮರಣ ಹೊಂದಿದ ಮತದಾರರ ಮಾಹಿತಿಯನ್ನು ನಿಯಮಾನುಸಾರ ಪರಿಷ್ಕರಿಸುವುದು ಸೇರಿದಂತೆ ಮತದಾರರ ಪಟ್ಟಿಯನ್ನು ನಿಖರಗೊಳಿಸುವ ಕಾರ್ಯದಲ್ಲಿ ಬೂತ್ ಮಟ್ಟದ ತಂಡಗಳು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಬೂತ್ ಅಧ್ಯಕ್ಷರು ಹಾಗೂ ಬಿ.ಎಲ್.ಎ-2 ಸದಸ್ಯರು ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಪ್ರತಿಯೊಬ್ಬ ಅರ್ಹ ನಾಗರಿಕರಿಗೆ ಸರಿಯಾದ ಮಾಹಿತಿ ತಲುಪಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು.
ಪಕ್ಷದ ಸಂಘಟನೆ ಬಲಿಷ್ಠವಾಗಲು ಬೂತ್ ಮಟ್ಟದ ಕಾರ್ಯಚಟುವಟಿಕೆಗಳು ಅತ್ಯಂತ ಪ್ರಮುಖವಾಗಿದೆ ಎಂದ ಶಾಸಕರು ಸಂಘಟನೆಯ ಯಶಸ್ಸಿಗೆ ಪ್ರತಿಯೊಬ್ಬ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಬೂತ್ ಮಟ್ಟದ ಸಂಘಟನೆ, ಸದಸ್ಯತ್ವ ವಿಸ್ತರಣೆ, ಜನಸಂಪರ್ಕ ಅಭಿಯಾನ,ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವುದು ಹಾಗೂ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಸಂಘಟನಾತ್ಮಕ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು.
ಈ ಸಂದರ್ಭ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿನ ಸಂಘಟನಾ ಚಟುವಟಿಕೆಗಳು ಹಾಗೂ ಸ್ಥಳೀಯ ವಿಚಾರಗಳ ಕುರಿತು ಅಭಿಪ್ರಾಯಗಳನ್ನು  ಹಂಚಿಕೊಂಡರು.
  ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ,ಪ್ರ. ಕಾರ್ಯದರ್ಶಿ ಸುದರ್ಶನ್ ಬಜ,ಪ್ರಮುಖರಾದ ದೇವದಾಸ ಶೆಟ್ಟಿ ಬಂಟ್ವಾಳ, ಸತೀಶ್ ಪೂಜಾರಿ ಅಲಕ್ಕೆ, ಸಂತೋಷ್ ರಾಯಿಬೆಟ್ಟು,ವಸಂತ್ ಅಣ್ಣಳಿಕೆ, ರಶ್ಮಿತ್ ಶೆಟ್ಟಿ, ಹರೀಶ್ ಆಚಾರ್ಯ ಸೇರಿದಂತೆ ರಾಯಿ ಹಾಗೂ ಕೊಯಿಲ ಗ್ರಾಮದ ಬೂತ್ ಅಧ್ಯಕ್ಷರು,  ಬಿ.ಎಲ್.ಎ-2 ಸದಸ್ಯರು, ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *