ಬಂಟ್ವಾಳ: ಶಾಲಾ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಶಾಲಾ ಬಸ್‌ಗಳ ನಿರ್ವಹಣೆಯನ್ನು ನಿಯಮಿತವಾಗಿ ನಡೆಸುವುದರ ಜೊತೆಗೆ ಸರ್ಕಾರದ ಎಲ್ಲಾ ಸುರಕ್ಷತಾ ನಿಯಮಗಳನ್ನು ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಶಾಲಾ ಆಡಳಿತ ಹಾಗೂ ಪ್ರಾಂಶುಪಾಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಮಂಗಳೂರು ಉಪಸಾರಿಗೆ ಆಯುಕ್ತ ಮುರುಘೇಂದ್ರ ಶಿರೋಳ್ಕರ್ ಎಚ್ಚರಿಸಿದ್ದಾರೆ.


ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ಶಾಲೆಯಲ್ಲಿ  ಜಿಲ್ಲೆಯ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಆಯೋಜಿಸಿದ್ದ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಾಲಾ ಬಸ್‌ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ವಿದ್ಯಾರ್ಥಿನಿಯರು ಪ್ರಯಾಣಿಸುವ ಬಸ್‌ಗಳಲ್ಲಿ ಮಹಿಳಾ ನಿರ್ವಾಹಕಿ ಇರಬೇಕು. ಚಾಲಕರು ಸಮವಸ್ತ್ರ ಧರಿಸಬೇಕು ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಶಿಕ್ಷಣ ಸಂಸ್ಥೆಗಳು  ನಿಗಾ ವಹಿಸಬೇಕು ಎಂದು ಅವರು ಹೇಳಿದರು.

ಕೆಲವು ಶಾಲಾ ಬಸ್‌ಗಳು ಫಿಟ್‌ನೆಸ್ ಪ್ರಮಾಣಪತ್ರ (ಎಫ್‌.ಸಿ.) ಇಲ್ಲದೆ ಸಂಚರಿಸುತ್ತಿವೆ ಎಂಬ ಮಾಹಿತಿ ಇದೆ. ಅಂತಹ ವಾಹನಗಳು ಪತ್ತೆಯಾದರೆ ಅವುಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಪ್ರಾಂಶುಪಾಲರು ಹೊಣೆಗಾರರಾಗಲಿದ್ದಾರೆ ಎಂದು ಅವರು ತಿಳಿಸಿದರು.

ಹಿರಿಯ ಪ್ರಾದೇಶಿಕ ಅಧಿಕಾರಿ ಹಾಗೂ ರೆಡ್ ಕ್ರಾಸ್‌ನ ಎಸ್.ಎಸ್. ಪಾಷಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಬಂಟ್ವಾಳ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಕೆ.ಪಿ., ವಿಷಯ ಪರಿವೀಕ್ಷಕ ಲಕ್ಷ್ಮೀನಾರಾಯಣ್, ಇನ್ಫೆಂಟ್ ಜೀಸಸ್ ಶಾಲೆಯ ಮುಖ್ಯಶಿಕ್ಷಕ ವಂ.ಫಾ. ಮೆಲ್ವಿನ್ ಲೋಬೋ, ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಆದರ್ಶ್ ಎ.ಎಂ., ಎನ್. ಮಂಜುನಾಥ್, ಗೋಪಾಲಕೃಷ್ಣ ಭಟ್, ವಿದ್ಯಾ ಕುಮಾರಿ, ಪ್ರಮೋದ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿಕ್ಷಣ ಸಂಯೋಜಕಿ ಸುಧಾ ಸ್ವಾಗತಿಸಿ, ಪ್ರತಿಮಾ ವೈ.ವಿ. ನಿರೂಪಿಸಿದರು. ಶ್ವೇತಾ ಪ್ರಾರ್ಥಿಸಿದರು.

By Suddi9

Leave a Reply

Your email address will not be published. Required fields are marked *