ಬಂಟ್ವಾಳ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಬಂಟ್ವಾಳ ತಾಲೂಕಿನ ಭೂಕೈಲಾಸವೆಂದೇ ಪ್ರಸಿದ್ಧವಾದ ಐತಿಹಾಸಿಕ ಶ್ರೀ ಕ್ಷೇತ್ರ ಕಾರಿಂಜೇಶ್ವರದಲ್ಲಿ ’ಯೋಗ ವಿದ್ ಯೋಧ ’ ಕಾರ್ಯಕ್ರಮವನ್ನು ಜೂ.21 ರಂದು ಅಪರಾಹ್ನ 3 ಗಂಟೆಗೆ  ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ‌ ನಡೆಯಲಿದೆ.


ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಒಂದಾದ ಹಾಗೂ ಕೊಡ್ಯಾಮಲೆ ಬೆಟ್ಟಗಳ ಶ್ರೇಣಿಯಲ್ಲಿರುವ ಪ್ರಕೃತಿ ರುದ್ರ ರಮಣೀಯ ಪ್ರದೇಶ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆವರಣದಲ್ಲಿ ಅಂದು ನಡೆಯಲಿರುವ  3ನೇ ಆವೃತ್ತಿಯ ’ಯೋಗ ವಿದ್ ಯೋಧ’ ಎಂಬ ಧ್ಯೇಯವಾಕ್ಯದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.

ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರಂಭಗೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದ್ದು, ಈ ಬಾರಿಯು ಪ್ರಕೃತಿ ಸೌಂದರ್ಯದ ನಡುವೆ ಕಂಗೊಳಿಸುವ ಕಾರಿಂಜೇಶ್ವರ ಕ್ಷೇತ್ರದ ಬೆಟ್ಟದ ಆವರಣದಲ್ಲಿ  ಯೋಗಪಟು ಗೋಪಾಲಕೃಷ್ಣ ದೇಲಂಪಾಡಿ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಯೋಗಾಭ್ಯಾಸದಲ್ಲಿ, ವಿದ್ಯಾರ್ಥಿಗಳು, ನಿವೃತ್ತ ಯೋಧರು, ಗಣ್ಯರು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ. 


ದಕ್ಷಿಣ ಕನ್ನಡದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ‘ಯೋಗ ವಿದ್ ಯೋಧ’ ಕಾರ್ಯಕ್ರಮವನ್ನು ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಆಯೋಜಿಸಲಾಗುತ್ತಿದೆ. ಪ್ರಥಮ ಬಾರಿ ಸಾಹಸ ಜಲಕ್ರೀಡೆಗಳ ತಾಣವಾಗಿರುವ ಸಸಿಹಿತ್ಲುವಿನಲ್ಲಿ ಹಾಗೂ ಕಳೆದ ಬಾರಿ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಕಡಲ ಕಿನಾರೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಬಾರಿ ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿರುವ ಕಾರಿಂಜ ಬೆಟ್ಟದಲ್ಲಿ ಆಯೋಜಿಸಲಾಗಿದ್ದು ಈ ಅದ್ಭುತ ಧಾರ್ಮಿಕ ಹಾಗೂ ಪ್ರವಾಸಿ ತಾಣವು ಜಾಗತಿಕ ಭೂಪಟದಲ್ಲಿ ಗುರುತಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಕರಾವಳಿಯ ಶ್ರೀಮಂತ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದು ಸಂಸದ ಕ್ಯಾ.ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

By Suddi9

Leave a Reply

Your email address will not be published. Required fields are marked *