ಗುರುಪುರ : ರಾಷ್ಟಿçಯ ಹೆದ್ದಾರಿ ಪಕ್ಕದಲ್ಲಿ ಸ್ಥಳೀಯ ವಾಮಂಜೂರು ಜಂಕ್ಷನ್‌ಗೆ ಅನತಿ ದೂರದಲ್ಲಿ, ವಸತಿಪ್ರದೇಶ, ಅಂಗಡಿ-ಮುಂಗಟ್ಟುಗಳ ತ್ಯಾಜ್ಯ ನೀರು ಹರಿಯಲು ಇಲ್ಲಿನ ರಾಜಕಾಲುವೆಯಲ್ಲಿ ರಾಷ್ಟಿçಯ ಹೆದ್ದಾರಿ(ಎನ್‌ಎಚ್) ಇಲಾಖೆಯು ಹೊಸದಾಗಿ ಚರಂಡಿ ವ್ಯವಸ್ಥೆ ಮಾಡುತ್ತಿದ್ದು, ಇದರಿಂದ ವಾಮಂಜೂರು ಕೆಳಭಾಗದ ಕುಡಿಯುವ ನೀರಿನ ಬಾವಿಗಳ ನೀರು ಕಲುಷಿತಗೊಳ್ಳುವುದರ ಜೊತೆಗೆ ಫಲ್ಗುಣಿ ನದಿ ನೀರು ಮಲಿನವಾಗಲಿದೆ ಎಂದು ಎಚ್ಚರಿಸಿರುವ ಸ್ಥಳೀಯರು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಮಳೆ ನೀರು ಹರಿಯುವ ರಾಜಕಾಲುವೆಯಲ್ಲಿ ಬೇಸಗೆ ಹೊತ್ತಲ್ಲಿ ಅತಿ ದುರ್ವಾಸನೆಯುಕ್ತ ಕಪ್ಪು ಕೊಳಚೆ ನೀರು ಹರಿಯುತ್ತಿತ್ತು. ಮಳೆ ಬಂದಾಗ ಈ ಸಮಸ್ಯೆ ಇಲ್ಲದಿದ್ದರೂ ಮಳೆ ನಿಂತಾಗ ವಾಮಂಜೂರು ಜಂಕ್ಷನ್‌ನ ಮೇಲ್ಭಾಗದಿಂದ ಪುನಾ ಕೊಳಚೆ ನೀರು ಹರಿಯುತ್ತಿದೆ. ಈ ಹಿಂದೆ ಈ ನೀರು ಎಲ್ಲ ಇಂಗುತ್ತಿತ್ತು ಎಂಬುದು ನಿಗೂಢವಾಗಿದೆ. ಹೊಸ ಚರಂಡಿಯ ತ್ಯಾಜ್ಯ ನೀರು ರಾಜಕಾಲುವೆ ಸಂಪರ್ಕಿಸಿದರೆ, ಆ ನೀರು ಕೆಳಭಾಗದ ಕೆಲರೈಕೋಡಿ, ಸಂಕೇಶ, ಮಂಜಲ್ದೋಟವಾಗಿ ಉಳಾಯಿಬೆಟ್ಟು ಭಾಗದಲ್ಲಿ ಫಲ್ಗುಣಿ ನದಿ ಒಡಲು ಸೇರಲಿದೆ. ಇದರಿಂದ ಮತ್ತಷ್ಟು ಅನಾಹುತವಾಗಲಿದೆ.
ಕೆಲವು ಸಂದರ್ಭಗಳಲ್ಲಿ ರಾಜಕಾಲುವೆ ಮುಂದುವರಿದ ತಿರುವೈಲಿನ ಕೆಲರೈಕೋಡಿ ಮತ್ತಿತರ ಪ್ರದೇಶಗಳ ಕುಡಿಯುವ ನೀರಿನ ಬಾವಿಗಳು ಹಾಗೂ ಕೆರೆಕಟ್ಟೆಗಳಿಗೆ ತ್ಯಾಜ್ಯ ನೀರು ಇಂಗುತ್ತಿದ್ದು, ಬಾವಿಗಳ ನೀರು ಕಲುಷಿಗೊಳ್ಳುತ್ತಿದೆ. ಆಗ ಬಾವಿ ನೀರು ಬಳಕೆಗೆ ಯೋಗ್ಯವಾಗಿರುವುದಿಲ್ಲ. ಮಲಿನ ನೀರಿಂದ ಕೆಳಭಾಗದಲ್ಲಿರುವ ನಾಗಬನ, ದೈವ-ದೇವಾಲಯಗಳಿಗೂ ಸಮಸ್ಯೆ ತಪ್ಪಿದ್ದಲ್ಲ. ಹಿಂದೆ ಮಳೆಗಾಲದಲ್ಲಿ ಈ ತೋಡಿನ ಮೂಲಕ ಹರಿಯುವ ನೀರಿನಲ್ಲಿ ಸ್ಥಳೀಯರು ಸ್ನಾನ ಮಾಡುತ್ತಿದ್ದರೆ, ರೈತರು ಕೃಷಿಗೆ ನೀರು ಬಳಿಕೆ ಮಾಡುತ್ತಿದ್ದರು. ತೆರೆದ ರಾಜಕಾಲುವೆ ಮೂಲಕ ಮಳೆ ನೀರು ಹೊರತುಪಡಿಸಿ ಬೇಸಗೆಯಲ್ಲೂ ಕೊಳಚೆ ನೀರು ಹರಿದು ಫಲ್ಗುಣಿ ನದಿ ಸೇರಿದರೆ, ಜನವಸತಿ ಪ್ರದೇಶಗಳಲ್ಲಿ ದುರ್ವಾಸನೆ, ಸೊಳ್ಳೆಕಾಟ ಹೆಚ್ಚಾಗಿ ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸ್ಥಳೀಯರು ಭೀತಿ ವ್ಯಕ್ತಪಡಿಸಿ ಜಿಲ್ಲಾಧಿಕಾರಿ, ಮನಪಾ ಸಹಿತ ಸಂಬAಧಪಟ್ಟ ಇಲಾಖೆಗಳಿಗೆ ದೂರು ನೀಡಿದ್ದಾರೆ.

ಫಲ್ಗುಣಿ ನದಿಗೆ ಕೊಳಚೆ ನೀರು :
ಫಲ್ಗುಣಿ ನದಿಗೆ ಈಗಾಗಲೇ ಮರವೂರು, ಮೂಡುಶೆಡ್ಡೆ ಮತ್ತಿತರ ಕಡೆಗಳಲ್ಲಿ ವಿಷಯುಕ್ತ ತ್ಯಾಜ್ಯ ನೀರು ಸೇರುತ್ತಿದೆ. ಅಧಿಕಾರಿಗಳು ಇನ್ನೂ ದಿವ್ಯ ನಿರ್ಲಕ್ಷ ವಹಿಸಿದರೆ ಭವಿಷ್ಯದಲ್ಲಿ ವಾಮಂಜೂರು ಭಾಗದಿಂದಲೂ ಭಾರೀ ಪ್ರಮಾಣದ ತ್ಯಾಜ್ಯ ನೀರು ಫಲ್ಗುಣಿ ಒಡಲು ಸೇರಲಿದೆ. ಅಂತಹ ಸಂದರ್ಭಗಳಲ್ಲಿ ಫಲ್ಗುಣಿ ನದಿ ನೀರು ಅವಲಂಬಿಸಿರುವ ಸರ್ಕಾರಿ ಕುಡಿಯುವ ನೀರಿನ ಯೋಜನೆಗಳ ಮೇಲೆ ಕೆಟ್ಟ ಪ್ರಭಾವ ಬೀರಲಿದೆ. ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರಿಂದ ಮೀನುಗಳ ಸತ್ತರೆ ಅಚ್ಚರಿಪಡಬೇಕಾಗಿಲ್ಲ.

`ಮಳೆ ನೀರು ಹರಿಯುವ ರಾಜಕಾಲುವೆಗೆ ಎನ್‌ಎಚ್ ಇಲಾಖೆಯು ಈಗ ಹೊಸದಾಗಿ ವಾಮಂಜೂರು ಜಂಕ್ಷನ್ ಮೇಲ್ಭಾಗದ ಜನವಸತಿ, ಅಪಾರ್ಟ್ಮೆಂಟಗಳ ತ್ಯಾಜ್ಯ ನೀರಿನ ಸಂಪರ್ಕಕ್ಕೆ ಚರಂಡಿ ನಿರ್ಮಿಸುತ್ತಿದೆ. ಇದು ಶಾಶ್ವತಗೊಂಡಲ್ಲಿ ಬೇಸಗೆಯಲ್ಲಿ ರಾಜಕಾಲುವೆ ಮೂಲಕ ಕೆಲರೈಕೋಡಿ ಮತ್ತಿತರ ಪ್ರದೇಶಗಳಲ್ಲಿ ಹರಿದರೆ ಬಾವಿಗಳ ನೀರು ಮಲಿನಗೊಳ್ಳಲಿದೆ. ಫಲ್ಗುಣಿ ನೀರು ಕಲುಪಿತಗೊಳ್ಳಲಿದೆ. ಜನರ ಆರೋಗ್ಯದ ಮೇಲಿನ ಕಾಳಜಿಯಿಂದ ಇಂತಹ ಅವೈಜ್ಞಾನಿಕ ವ್ಯವಸ್ಥೆಗೆ ಅವಕಾಶ ನೀಡಬಾರದು” ಎಂದು ಕೆಲರೈಕೋಡಿ ನಿವಾಸಿ ಜಯಂತಿ ಡಿ. ಅಮೀನ್ ಮನವಿ ಒತ್ತಾಯಿಸಿದ್ದಾರೆ.“ವಾಮಂಜೂರು ಜಂಕ್ಷನ್ ಮೇಲ್ಭಾಗದ ವಸತಿ ಪ್ರದೇಶಗಳು ಮತ್ತು ಅಂಗಡಿ-ಮುಂಗಟ್ಟುಗಳ ತ್ಯಾಜ್ಯ ನೀರು ರಾಜಕಾಲುವೆ ಸಂಪರ್ಕಿಸಬಾರದು. ಈ ವಿಷಯದಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಮತ್ತು ಮಂಗಳೂರು ಮಹಾನಗರ ಪಾಲಿಕೆಗೆ ಮನವಿ ನೀಡಿದ್ದೇವೆ. ಮನವಿಗೆ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ. ವಸತಿ ಪ್ರದೇಶದಲ್ಲಿರುವ ಮನೆ, ಅಪಾರ್ಟ್ಮೆಂಟ್ ಮತ್ತಿತರ ಕಟ್ಟಡ ರಚನೆಗಳ ತ್ಯಾಜ್ಯ ನೀರು ಈವರೆಗೆ ಈ ರಾಜಕಾಲುವೆಯಲ್ಲಿ ಹರಿದಿಲ್ಲ. ತ್ಯಾಜ್ಯ ನೀರು ಹರಿದರೆ ರಾಜಕಾಲುವೆ ಆಸುಪಾಸಿನಲ್ಲಿ ವಾಸಿಸುತ್ತಿರುವ ೫೦ಕ್ಕೂ ಹೆಚ್ಚಿನ ಕುಟುಂಬಗಳ ಮನೆಗಳ ಜನರಿಗೆ ತೀವ್ರ ತೊಂದರೆಯಾಗಲಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಗಳಿಗೆ ಇದೆ” ಎಂದು ರವಿರಾಜ ಸುವರ್ಣ ತಿರುವೈಲು ಹೇಳಿದರು.

`ರಾಜಕಾಲುವೆಯಲ್ಲಿ ಮಳೆ ನೀರಿನ ಹೊರತು ವಾಮಂಜೂರು ಜಂಕ್ಷನ್ ಮೇಲ್ಭಾಗದ ತ್ಯಾಜ್ಯ ನೀರು ಹರಿಯುವಂತಿಲ್ಲ. ಎನ್‌ಎಚ್ ಬಳಿ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಚರಂಡಿ ಕಾರ್ಯ ಸ್ಥಗಿತಗೊಳಿಸಿ, ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸಬೇಕು. ಕೊಳಚೆ ನೀರು ಹರಿದರೆ ಪರಿಸರ, ಜನರ ಆರೋಗ್ಯ ಮತ್ತು ನದಿ ನೀರಿನ ಮೇಲೆ ದುಷ್ಪರಿಣಾಮ ಬೀರಲಿದೆ” ಎಂದು ಶ್ರೀನಿವಾಸ ಸುವರ್ಣ ಮಲ್ಲೂರು ಮತ್ತು ಹರಿಪ್ರಸಾದ್ ಆಳ್ವ ವಾಮಂಜೂರು ಬೇಸರ ವ್ಯಕ್ತಪಡಿಸಿದ್ದಾರೆ.
