ಬಂಟ್ವಾಳ: ಶ್ರೀರಾಮ ನವಮಿಯ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀರಾಮ ತಾರಕ ಯಾಗ ಮಾರ್ಚ್ 27ರಂದು ಬಿ.ಸಿ.ರೋಡಿನ ಕಾಮಾಜೆ ದೈಪಲದ ಶಿವಾಜಿನಗರದಲ್ಲಿರುವ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ, ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ವತಿಯಿಂದ ನಡೆಯಲಿದೆ ಎಂದು ಮಂದಿರ ಅಧ್ಯಕ್ಷ ಕೇಶವ ದೈಪಲ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಂದಿರದ ವತಿಯಿಂದ 15ನೇ ವರ್ಷದ ಕಾರ್ಯಕ್ರಮದ ನಿಮಿತ್ತವಾಗಿ ಈ ಬಾರಿ ಯಾಗ ಕೈಗೊಳ್ಳಲಾಗಿದ್ದು, ಈಗಾಗಲೇ ಸುತ್ತಮುತ್ತಲಿನ ಮನೆ,ಮನೆಗಳನ್ನು ಸಂಪರ್ಕಿಸಿ ಈ ಕುರಿತು ಮಾಹಿತಿ ನೀಡಲಾಗಿದೆ.

ಸ್ಥಳೀಯ 10ಕ್ಕೂ ಅಧಿಕ ಸಂಘ, ಸಂಸ್ಥೆಗಳು ಸ್ವಯಂಸ್ಪೂರ್ತಿಯಿಂದ ಶ್ರಮದಾನದಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದ್ದಾರೆ.ಅಂದು ಬೆಳಗ್ಗೆ 8ರಿಂದ ದೇವತಾ ಪ್ರಾರ್ಥನೆ, ಆದ್ಯ ಗಣಯಾಗ, 9ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 10ರಿಂದ ವೇದಮೂರ್ತಿ ಶ್ರೀ ರಾಜಗೋಪಾಲಾಚಾರ್ಯರ ನೇತ್ರತ್ವದಲ್ಲಿ ಒಂದು ಲಕ್ಷ ಶ್ರೀರಾಮ ತಾರಕ ಜಪ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 18 ದಿನಗಳ ನಗರ ಭಜನೆಯ ಮಂಗಲೋತ್ಸವ, ರಾತ್ರಿ ದೇವರ ಮಹಾಪೂಜೆ ನಡೆಯಲಿದೆ ಎಂದರು.
ಬಳಿಕ ಮಂದಿರದ ಗೌರವಾಧ್ಯಕ್ಷರಾದ ಎ.ನೇಮಿರಾಜ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು,ಆರ್ ಎಸ್ ಎಸ್ ಪ್ರಮುಖರಾದ ಡಾ| ಪ್ರಭಾಕರ್ ಭಟ್, ಸಂಸದ ಬ್ರಿಜೇಶ್ ಚೌಟ,ಶಾಸಕ ರಾಜೇಶ್ ನಾಯ್ಕ್, ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.ತದನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಾಲಗೋಕುಲ ಮಕ್ಕಳಿಂದ ಕುಣಿತ ಭಜನೆ,ವಿವಿಧ ವಿನೋದಾವಳಿಗಳು ಹಾಗೂ ಭಕ್ತಿಪ್ರಧಾನ ಪೌರಾಣಿಕ ನಾಟಕ ನಡೆಯಲಿದೆ ಎಂದು ಅವರು ತಿಳಿಸಿದರು.
ಕಳೆದ 15 ವರ್ಷಗಳಿಂದ ಮಂದಿರದ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,ನಗರ ಭಜನೆ,ಭಗವದ್ಗೀತೆ ಪಠಣ ಸಹಿತ ಹಲವಾರ ಕಾರ್ಯಕ್ತಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದು,ಮನೆ,ಮನೆ ಸಂಪರ್ಕದ ಮೂಲಕ ಸ್ಥಳೀಯರನ್ನು ಮಂದಿರಕ್ಕೆ ಬರುವಂತೆ ಪ್ರೇರೆಪಿಸಲಾಗಿದೆ.
ಮುಂದಿನ ದಿನಗಳಲ್ಲಿ ಮಂದಿರದ ಜೀರ್ಣೋದ್ಧಾರ ಕಾರ್ಯದ ಜೊತೆಗೆ ಸೀತಾಮಾತ ಕಲ್ಯಾಣ ಮಂಟಪದ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದೆ ಈ ನಿಟ್ಟಿನಲ್ಲಿ ಇರಿಸಲಾದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಶ್ರೀರಾಮ ತಾರಕ ಯಾಗ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷರಾದ ಚಂದಪ್ಪ ರಾಜೀವಪಲ್ಕೆ, ಪ್ರಮುಖರಾದ ನಾರಾಯಣ ಮಾಸ್ಟರ್ ರಾಜೀವಪಲ್ಕೆ, ಅಶೋಕ್ ಕಾಮಾಜೆ, ಮಹಿಳಾ ಸಮಿತಿ ಅಧ್ಯಕ್ಷೆ ವಾಣಿ ಕೇಶವ ಸಹಿತ ಪ್ರಮುಖರು ಉಪಸ್ಥಿತರಿದ್ದರು.
