ಬಂಟ್ವಾಳ: ಸಂಘಟನೆ  ಕೇವಲ ಸಭೆ-ಸಮಾರಂಭಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದ ಪ್ರತಿಯೋರ್ವನ ಕಷ್ಟ-ಸುಖಗಳಿಗೆ ಸ್ಪಂದಿಸುವ ಮೂಲಕ ಸರ್ವರ ಏಳಿಗೆಗೆ ಪೂರಕವಾಗುವ ಶಕ್ತಿಯಾಗಬೇಕು ಎಂದು ಕಾವಳಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಮೋಹನ್ ಶೆಟ್ಟಿ ನರವಲ್ದಡ್ಡ ಅಭಿಪ್ರಾಯಪಟ್ಟರು.
ಇರ್ವತ್ತೂರು ಗ್ರಾಮದ ಬಾಲಕೃಷ್ಣ ಶೆಟ್ಟಿ ಅವರ ನಿವಾಸದಲ್ಲಿ ನಡೆದ ಕಾವಳಕಟ್ಟೆ ವಲಯ ಬಂಟರ ಸಂಘದ ಗ್ರಾಮವಾರು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಸ್ಪರ ಸಹಕಾರ ಮತ್ತು ಅಚಲ ನಂಬಿಕೆಯೇ ಸಂಘಟನೆಯ ಅಡಿಪಾಯ. ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು.  ಇಂತಹ ಸಾಮಾಜಿಕ ಕಾರ್ಯಕ್ಕೆ  ಪ್ರತಿಯೊಬ್ಬ ಸದಸ್ಯನು
ಕೈಜೋಡಿಸಿದಾಗ ವಲಯವು ಜಿಲ್ಲೆ ಮತ್ತು ರಾಜ್ಯದಲ್ಲಿ ಮಾದರಿಯ ಸಂಘಟನೆಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಬಂಟ ಸಂಘದ ಹಿರಿಯ ಸದಸ್ಯ ಶ್ರೀಧರ ಭಂಡಾರಿ ಬೆಂಗತ್ತೋಡಿ ಮಾತನಾಡಿ , ಬಂಟ ಸಮುದಾಯಕ್ಕೆ ತನ್ನದೇ ಆದ ತ್ಯಾಗ ಮತ್ತು ಪರಂಪರೆಯ  ಇತಿಹಾಸವಿದೆ. ಆಧುನಿಕತೆಯ ಒತ್ತಡದಲ್ಲಿ ಯುವ ಪೀಳಿಗೆ ಮೂಲ ಆಚಾರ-ವಿಚಾರ, ಕೌಟುಂಬಿಕ ಬಾಂಧವ್ಯ ಮತ್ತು ಪೂರ್ವಜರು ನಡೆದು ಬಂದ ಸಂಸ್ಕಾರಗಳನ್ನು ಮರೆಯುತ್ತಿರುವ ಈ ಕಾಲಘಟ್ಟದಲ್ಲಿ ಬಂಟರ ಇತಿಹಾಸ ಮತ್ತು ಸಂಸ್ಕಾರಗಳ ಅರಿವು ಮೂಡಿಸುವ ಕಾರ್ಯಾಗಾರಗಳು ನಿರಂತರವಾಗಿ ನಡೆಯಬೇಕು ಎಂದರು.
ಸಂಘಟನಾ ಕಾರ್ಯದರ್ಶಿ ಪುನೀತ್ ಶೆಟ್ಟಿ ಮಾತನಾಡಿ,  ಹಳ್ಳಿಯ ಕೊನೆಯ ಮನೆಯ ಬಂಟ ಬಂಧುವಿಗೂ ಆತ್ಮವಿಶ್ವಾಸ ನೀಡುವ ಆಸರೆಯಾಗಬೇಕು. ಪ್ರಸ್ತುತ ವಿದ್ಯಮಾನಗಳ ನಡುವೆ ನಮ್ಮ ಸಮಾಜದ ಯುವಕರು ಹಾಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಒಂಟಿಯಲ್ಲ ಎಂಬ ಭರವಸೆಯ ಬೆಳಕನ್ನು ನೀಡಬೇಕು. ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ  ವರದಿ ವಾಚಿಸಿ, ಲೆಕ್ಕಪತ್ರವನ್ನು ಮಂಡಿಸಿದರು. ಸಂಘದ ನಿಧಿ ಬಳಕೆಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಸಭೆಯಲ್ಲಿ  ಅನಾರೋಗ್ಯಕ್ಕೀಡಾದವರು,ಅಶಕ್ತರಿಗೆ ವಲಯ ಮತ್ತು ತಾಲೂಕು ಸಂಘದ ವತಿಯಿಂದ ಆರ್ಥಿಕ ನೆರವು ನೀಡಲು ನಿರ್ಣಯಿಸಲಾಯಿತು. ಕಿರು ಉಳಿತಾಯ ಯೋಜನೆಯನ್ನು  ವಿಸ್ತರಿಸಲು ಮತ್ತು ಹೊಸ ಸದಸ್ಯತ್ವಕ್ಕೆ ಒತ್ತು ನೀಡಲು ತೀರ್ಮಾನಿಸಲಾಯಿತು.
ವೇದಿಕೆಯಲ್ಲಿ ವಲಯ ಸಂಘದ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಬಿಯಂತಬೆಟ್ಟು, ಕೋಶಾಧಿಕಾರಿ ಚಂದ್ರಶೇಖರ ಶೆಟ್ಟಿ ಪಣೆಕಲ, ಯುವ ವಿಭಾಗದ ಅಧ್ಯಕ್ಷ ಕಿಶೋರ್ ರೈ ಉಪಸ್ಥಿತರಿದ್ದರು.  ಗಣೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. 

 

By Suddi9

Leave a Reply

Your email address will not be published. Required fields are marked *