ಮಂಗಳೂರು: ಕಳೆದ 6 ತಿಂಗಳಿಂದ 8 ಬಾರಿ ಇಳಿಕೆಯಾಗಿದ್ದು, ಈ ಅವಧಿಯಲ್ಲಿ ಲೀ.1ರ 10 ರೂಪಾಯಿಯಷ್ಟು ಇಳಿಕೆಯಾಗಿದೆ. ಪೆಟ್ರೋಲ್ ದರ ರೂ.14 ರಷ್ಟು ಇಳಿಕೆಯಾಗಿದೆ. ಆದರೂ ಜನಸಾಮಾನ್ಯರು ಸಂಚರಿಸುವ ಬಸ್ ಪ್ರಯಾಣ ದರವನ್ನು ಇಳಿಸಲು ರಾಜ್ಯ ಸರಕಾರವಾಗಲೀ, ಜಿಲ್ಲಾಡಳಿತವಾಗಲೀ, ಖಾಸಗಿ ಬಸ್ಸು ಮಾಲಕರಾಗಲೀ ಮುಂದಾಗದೆ ಇದ್ದು, ಸಾರ್ವಜನಿಕರು, ಪ್ರಯಾಣಿಕರು, ರಾಜಕೀಯ ಪಕ್ಷಗಳು ಹೋರಾಟಕ್ಕೆ ಇಳಿಯುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತು ಬಸ್ಸು ಪ್ರಯಾಣ ದರವನ್ನು ಇಳಿಸಬೇಕೆಂದು ಬಿಜೆಪಿ ದ.ಕ.ಜಿಲ್ಲಾ ಸಮಿತಿ ಸರಕಾರವನ್ನು ಒತ್ತಾಯಿಸಿದೆ.

ಡೀಸಿಲ್ ಮತ್ತು ಪೆಟ್ರೋಲ್ ದರ ಅಲ್ಪ ಪ್ರಮಾಣದಲ್ಲಿ ಏರಿಕೆಯಾದ ತಕ್ಷಣ ಪ್ರಯಾಣ ದರವನ್ನು ಏರಿಕೆ ಮಾಡುವ ಸರಕಾರಿ ಮತ್ತು ಖಾಸಗಿ ಬಸ್ಸಿನವರು ಈಗ ಮೌನವಾಗಿರುವುದನ್ನು ಬಿಜೆಪಿ ಟೀಕಿಸಿದೆ.
ದೇಶದಲ್ಲಿ ಈರುಳ್ಳಿ, ತರಕಾರಿ, ಖಾದ್ಯ ತೈಲಗಳು, ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಣದುಬ್ಬರ, ಸಗಟು ಹಣದುಬ್ಬರ ಮತ್ತು ಚಿಲ್ಲರೆ ಹಣದುಬ್ಬರ ಶೂನ್ಯಕ್ಕೆ ಇಳಿದಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಅಚ್ಚೆ ದಿನಗಳು ಸಾಕಾರಗೊಳ್ಳುತ್ತಿದೆ. ಅಲ್ಲದೆ ಸಗಟು ಮತ್ತು ಚಿಲ್ಲರೆ ಹಣದುಬ್ಬರವನ್ನು ಮಾನದಂಡವಾಗಿದ್ದು, ಬ್ಯಾಂಕ್ ಬಡ್ಡಿ ದರಗಳು ಪರಿಷ್ಕರಣೆಯಾಗುತ್ತಿದ್ದು, ಇದೀಗ ಶೂನ್ಯಕ್ಕೆ ಇಳಿದಿರುವ ಸಗಟು ದರ ಸೂಚ್ಯಂಕದಿಂದ ದೇಶದ ಬ್ಯಾಂಕುಗಳು ಬಡ್ಡಿ ದರವನ್ನು ಕಡಿಮೆಗೊಳಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಎಂದು ಜಿಲ್ಲಾ ವಕ್ತಾರ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಪತ್ರಿಕಾ ಹೇಳಿಕೆಯೊಂದರಲ್ಲಿ ಒತ್ತಾಯಿಸುವರು.

