ಬಂಟ್ವಾಳ: ಪುರಸಭಾ ವ್ಯಾಪ್ತಿಯ ಎರಡನೇ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ಪ್ರಗತಿಯ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಿ.ಸಿ.ರೋಡಿನಲ್ಲಿರುವ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯ ಬಳಿಕ ಶಾಸಕರು ಈ ಬಗ್ಗೆ ಮಾಹಿತಿ ನೀಡಿ,ಪುರಸಭಾ ವ್ಯಾಪ್ತಿಯ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯಲ್ಲಿನ ಕಾಮಗಾರಿಯಲ್ಲಾಗಿರುವ ಕೆಲ ವಿಳಂಬವಾಗಿದೆ. ಈ ನಿಟ್ಟಿನಲ್ಲಿ ಕಳೆದೆರಡು ತಿಂಗಳಿನಿಂದ ಪ್ರತಿ ವಲಯಗಳ ಕಾಮಗಾರಿ ಮುಕ್ತಾಯಕ್ಕೆ ಗಡುವನ್ನಿತ್ತು ಸಭೆಗಳನ್ನು ನಡೆಸಲಾಗುತ್ತಿದೆ. _3 ವಲಯಗಳ ಪೈಕಿ 2 ವಲಯಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಬೆರಳೆಣಿಕೆಯ ಮನೆಗಳಿಗೆ ನೀರಿನ ಸಂಪರ್ಕ ಬಾಕಿ ಇದೆ.

ಮೂರನೇ ವಲಯದ ಕಾಮಗಾರಿ ಮುಕ್ತಾಯಕ್ಕೆ ಡಿ. 30 ರ ಗಡುವು ನೀಡಲಾಗಿದೆ. ಮುಂದಿನ ದಿನದಲ್ಲಿ ಪುರಸಭಾ ವ್ಯಾಪ್ತಿಯ ಸಮಗ್ರ ಒಳಚರಂಡಿ ಯೋಜನೆಯ ಕಾಮಗಾರಿಯನ್ನೂ ಇದೇ ರೀತಿ ಫಾಲೋ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಬಂಟ್ವಾಳ ಪುರಸಭೆಯ ಹಂಗಾಮಿ ಅಧಗಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೋ, ಸದಸ್ಯರಾದ ಎ.ಗೋವಿಂದ ಪ್ರಭು, ಹರಿಪ್ರಸಾದ್, ಮೀನಾಕ್ಷಿ ಗೌಡ, ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಸಿ, ಮುಖ್ಯಾಧಿಕಾರಿ ತೀರ್ಥಪ್ರಸಾದ್ ಕೆ.ಬಿ, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ,ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಎಂಜಿನಿಯರ್ ಶೋಭಾಲಕ್ಷ್ಮೀ, ಪಿಡಿಎಂಸಿ ಎಂಜಿನಿಯರ್‌ಗಳಾದ ಹೇಮಂತ್ , ಅನೀಶ್ ಮತ್ತಿತರರು ಉಪಸ್ಥಿತರಿದ್ದರು.
ಸವಲತ್ತು ವಿತರಣೆ:
ಬಳಿಕ ಶಾಸಕ ರಾಜೇಶ್ ನಾಯ್ಕ್ ಅವರು ಫಲಾನುಭವಿಗಳಿಗೆ ಹಕ್ಕು ಪತ್ರ,ವಿವಿಧ ಸವಲತ್ತುಗಳನ್ನು ವಿತರಿಸಿದರು.
