ಪಾಣೆಮಂಗಳೂರು ಬಳಿ ಡಿವೈಡರ್ ಗೆ ಕಾರು ಡಿಕ್ಕಿ: ಚಾಲಕ ಮೃತ್ಯು,ಇಬ್ಬರಿಗೆ ಗಾಯ
ಬಂಟ್ವಾಳ : ಕಾರೊಂದು ಹೆದ್ದಾರಿಯ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಪಾಣೆಮಂಗಳೂರು ಸಮೀಪ ಮಂಗಳವಾರ ರಾತ್ರಿ ವೇಳೆ ಸಂಭವಿಸಿದೆ.

ಮೃತ ಕಾರು ಚಾಲಕನನ್ನು ಕಡಬ ತಾಲೂಕಿನ ಸವಣೂರು ನಿವಾಸಿ ಕಾರ್ತಿಕ್ ಕೆ ಎನ್ (23) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸಹ ಪ್ರಯಾಣಿಕರಾದ ಜಗದೀಶ್ ಹಾಗೂ ದೀಕ್ಷಿತ್ ಎಂಬವರು ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಗತ್ಯ ಕೆಲಸದ ನಿಮಿತ್ತ ಕಾರಿನಲ್ಲಿ ಮಂಗಳೂರಿಗೆ ತೆರಳಿ ತಮ್ಮ ಕೆಲಸ ಮುಗಿಸಿದ ಬಳಿಕ ಸಂಜೆಯ ಹೊತ್ತಿಗೆ ಪುತ್ತೂರಿನತ್ತ ತೆರಳುತ್ತಿದ್ದ ವೇಳೆ ಪಾಣೆಮಂಗಳೂರು ಹೆದ್ದಾರಿಯ ರಾಣಾ ಮಾರ್ಬಲ್ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಕಾರ್ತಿಕ್, ಜಗದೀಶ್ ಹಾಗೂ ದೀಕ್ಷಿತ್ ಅವರು ಗಾಯಗೊಂಡಿದ್ದ್ದು, ತಕ್ಷಣ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದೆಯಾದರೂ ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಕಾರ್ತಿಕ್ ಅವರು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ಸಹಪ್ರಯಾಣಿಕ ಕಡಬ ತಾಲೂಕು ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ಲಿತಿನ್ ಕೆ ಎಂ ಅವರ ದೂರಿನನ್ವಯ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



